
ಚಿಕ್ಕಮಗಳೂರು: ಶಿಕಾರಿಗೆ ಬಂದವರಂತೆ ನಟಿಸಿ ಏಕಾಏಕಿ ಮನೆ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುತ್ತಿಗೆಪುರ ಗ್ರಾಮದಲ್ಲಿ ನಡೆದಿದೆ. ಎಸ್ಟೇಟ್ ಮಾಲೀಕ ವಿಂದನ್ ಅವರ ಮನೆ ಮೇಲೆ 5ರಿಂದ 6 ಜನರ ತಂಡ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದೆ. ಗುಂಡಿನ ರಭಸಕ್ಕೆ ಮನೆಯ ಕಿಟಕಿ ಹಾಗೂ ಗೋಡೆಗಳು ಛಿದ್ರಗೊಂಡಿದ್ದು, ಮನೆಯಲ್ಲಿದ್ದವರು ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಗ್ರಾಮದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇನ್ನು ಫೈರಿಂಗ್ ನಡೆಸಿದವರ ಚಲನವಲನಗಳು ಮನೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗನ್ ಸಮೇತ ಮನೆಯ ಬಳಿ ಬರುತ್ತಿದ್ದಂತೆ ಸಿಸಿ ಕ್ಯಾಮೆರಾದಿಂದ ಅಲರ್ಟ್ ಸಿಗ್ನಲ್ ಕೂಡ ಲಭಿಸಿದೆ ಎನ್ನಲಾಗಿದೆ. ಕೊಲೆ ಮಾಡುವ ಉದ್ದೇಶದಿಂದಲೇ ದಾಳಿ ನಡೆಸಲಾಗಿದೆ ಎಂದು ಮನೆ ಮಾಲೀಕ ವಿಂದನ್ ಆರೋಪಿಸಿದ್ದು, ಘಟನೆಯ ಹಿಂದೆ ಹಳೆಯ ವೈಷಮ್ಯವೇ ಕಾರಣ ಎಂದು ಶಂಕಿಸಿದ್ದಾರೆ. ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ನೈಜ ತನಿಖೆ ನಡೆಸಿ, ದಾಳಿಯಲ್ಲಿ ಭಾಗಿಯಾದ ಎಲ್ಲ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಲಾಗಿದೆ.




