
ಶೃಂಗೇರಿ: ಸನಾತನ ಧರ್ಮದ ಪ್ರಚಾರ, ಭಾರತದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆ ಮತ್ತು ವೈದಿಕ ಜ್ಞಾನದ ಪ್ರಸಾರಕ್ಕಾಗಿ ಮೂರು ವರ್ಷಗಳಿಗೂ ಹೆಚ್ಚು ಕಾಲ ದೇಶಾದ್ಯಂತ ನಿರಂತರವಾಗಿ ಧರ್ಮ ವಿಜಯ ಯಾತ್ರೆ ಕೈಗೊಂಡಿರುವ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳ ಸಾಧನೆಗೆ ಅಂತರರಾಷ್ಟ್ರೀಯ ಮಟ್ಟದ ಗೌರವ ಲಭಿಸಿದೆ. ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಹೆಸರಿನಲ್ಲಿ ಲಂಡನ್ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆಯು ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದೆ. 2026ರ ನವೆಂಬರ್ 22ರಂದು ಈ ಪ್ರಶಂಸನಾ ಪತ್ರವನ್ನು ನೀಡಲಾಗಿದ್ದು, ಶೃಂಗೇರಿ ಶ್ರೀಗಳ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸೇವೆಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಂದ ಗೌರವವಾಗಿದೆ. ಪ್ರಸ್ತುತ ಮಧ್ಯಪ್ರದೇಶದ ಖಾರ್ಗೋನ್ ಜಿಲ್ಲೆಯ ಇಂದೋರ್ನಲ್ಲಿ ಜಗದ್ಗುರುಗಳು ಧರ್ಮಯಾತ್ರೆಯನ್ನು ಕೈಗೊಂಡಿದ್ದಾರೆ. ಈ ಮೂಲಕ ಶೃಂಗೇರಿ ಶ್ರೀ ಶಾರದಾ ಪೀಠದ ಧಾರ್ಮಿಕ ಪರಂಪರೆ ಹಾಗೂ ಸನಾತನ ಧರ್ಮದ ಪ್ರಸಾರ ಕಾರ್ಯಕ್ಕೆ ಮತ್ತೊಂದು ಗೌರವದ ಗರಿ ಮೂಡಿದಂತಾಗಿದೆ.




