
ಚಾಮರಾಜನಗರ: ಭಾರತೀಯ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಪವಿತ್ರ ಸ್ಥಾನವಿದ್ದು, ಭಕ್ತಿ, ನಂಬಿಕೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಸಂಸ್ಕೃತಿ ಚಿಂತಕ ಹಾಗೂ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಎನ್. ಋಗ್ವೇದಿ ತಿಳಿಸಿದರು. ನಗರದ ಋಗ್ವೇದಿ ಕುಟೀರದಲ್ಲಿ ಋಗ್ವೇದಿ ಯೂತ್ ಕ್ಲಬ್ ಹಾಗೂ ಜೈ ಹಿಂದ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ತುಳಸಿ ಹಬ್ಬ ಮತ್ತು ತುಳಸಿ ವಿವಾಹದ ಮಹತ್ವದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಭಾರತೀಯ ಸಂಪ್ರದಾಯದಲ್ಲಿ ಪ್ರತಿ ಮನೆಯಲ್ಲೂ ತುಳಸಿ ಗಿಡವನ್ನು ಪೂಜಿಸುವ ಪರಂಪರೆ ಬೆಳೆದು ಬಂದಿದೆ. ತುಳಸಿ ಗಿಡವು ಪರಿಸರದ ಶುದ್ಧತೆ ಹಾಗೂ ಆರೋಗ್ಯದ ದೃಷ್ಟಿಯಿಂದಲೂ ಮಹತ್ವ ಹೊಂದಿದೆ. ತುಳಸಿಯ ಎಲೆ, ಕಾಂಡ ಹಾಗೂ ಬೀಜಗಳನ್ನು ಆಯುರ್ವೇದದಲ್ಲಿಯೂ ಬಳಸಲಾಗುತ್ತದೆ. ಕಾರ್ತಿಕ ಮಾಸದ ಉತ್ಥಾನ ದ್ವಾದಶಿಯಂದು ಆಚರಿಸುವ ತುಳಸಿ ವಿವಾಹವು ಮನೆಮನೆಗಳಲ್ಲಿ ಶಾಂತಿ, ನೆಮ್ಮದಿ ಹಾಗೂ ಸಂಭ್ರಮದ ವಾತಾವರಣವನ್ನು ಮೂಡಿಸುತ್ತದೆ ಎಂದರು. ಕಾರ್ಯಕ್ರಮವನ್ನು ಜೈ ಹಿಂದ್ ಪ್ರತಿಷ್ಠಾನದ ನಿರ್ದೇಶಕಿ ಬೆಂಗಳೂರಿನ ಜ್ಯೋತಿಲಕ್ಷ್ಮಿ ನಾಗಭೂಷಣ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ತುಳಸಿ ಪೂಜೆಯು ಭಾರತೀಯರ ಪುರಾತನ ಸಂಪ್ರದಾಯಗಳಲ್ಲಿ ಒಂದಾಗಿದ್ದು, ಮಹಿಳೆಯರು ಪ್ರತಿನಿತ್ಯ ತುಳಸಿ ಕಟ್ಟೆಗೆ ಪೂಜೆ ಸಲ್ಲಿಸುವ ಮೂಲಕ ಕುಟುಂಬದ ರಕ್ಷಣೆ, ಅಭಿವೃದ್ಧಿ ಹಾಗೂ ನೆಮ್ಮದಿಗಾಗಿ ಪ್ರಾರ್ಥಿಸುತ್ತಾರೆ. ಇಂತಹ ಆಚರಣೆಗಳು ಮಾನಸಿಕ ಚೈತನ್ಯ ಮತ್ತು ಭಕ್ತಿಭಾವವನ್ನು ಹೆಚ್ಚಿಸುವುದರ ಜೊತೆಗೆ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿವೆ ಎಂದು ತಿಳಿಸಿದರು. ಜೈ ಹಿಂದ್ ಪ್ರತಿಷ್ಠಾನದ ಕುಸುಮ ಋಗ್ವೇದಿ ಮಾತನಾಡಿ, ತುಳಸಿ ಸಾಕ್ಷಾತ್ ಲಕ್ಷ್ಮೀ ಸ್ವರೂಪವಾಗಿದ್ದು, ಪ್ರತಿ ಮನೆಯಲ್ಲೂ ತುಳಸಿ ಪೂಜಿಸುವ ಸಂಪ್ರದಾಯವನ್ನು ಮುಂದಿನ ಪೀಳಿಗೆಗೂ ಪರಿಚಯಿಸಿ ಉಳಿಸಬೇಕಿದೆ. ಎಲ್ಲರೂ ಆರೋಗ್ಯ, ಸಮೃದ್ಧಿ ಹಾಗೂ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಹಾರೈಸಿ ತುಳಸಿ ವಿವಾಹದ ಪೌರಾಣಿಕ ಮಹತ್ವವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಯಲಹಂಕದ ರಾಧಾ ನಾಗಭೂಷಣ್, ವಾಣಿಶ್ರೀ ಮುರುಗೇಶ್, ವೈಷ್ಣವಿ, ವಂದನಾ, ಶ್ರಾವ್ಯ ಋಗ್ವೇದಿ, ವರ್ಷಿಣಿ, ಮಾಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.




