
ಚಿಕ್ಕಮಗಳೂರು: ತಾಲೂಕಿನ ಅರಳಗುಪ್ಪೆ ಗ್ರಾಮದ ಕಾರಂಜಿ ಕೆರೆಯಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಬಾತುಕೋಳಿ ಕೆರೆಗೆ ಹೋದ ಹಿನ್ನೆಲೆಯಲ್ಲಿ ಅದನ್ನು ಹಿಡಿಯಲು ತೆರಳಿದ ನಾಲ್ವರು ಮಕ್ಕಳು ನೀರುಪಾಲಾದ ದಾರುಣ ಘಟನೆ ಸಂಭವಿಸಿದ್ದು, ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಮೃತಪಟ್ಟವರು ಮಹಾದಿಯಾ, ಅರುನುಸ್, ನಾಯುಸ್ ಹಾಗೂ ಅಬ್ದುಲ್ ರೆಹಮಾನ್ ಎಂದು ಗುರುತಿಸಲಾಗಿದ್ದು, ನಾಲ್ಕು ವರ್ಷದ ಅರ್ಮಾನ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೃತರೆಲ್ಲರೂ 5ರಿಂದ 14 ವರ್ಷದೊಳಗಿನ ಮಕ್ಕಳಾಗಿದ್ದು, ಸಂಬಂಧಿಕರ ಮನೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ಆಸ್ಪತ್ರೆ ಮುಂಭಾಗದಲ್ಲಿ ಮೃತ ಮಕ್ಕಳ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.





