ಬೆಂಗಳೂರು: ವಾಟ್ಸಾಪ್ನಲ್ಲಿ ಬರುವ .APK ಫೈಲ್ ಅಥವಾ ಲಿಂಕ್ಗಳನ್ನು ಕ್ಲಿಕ್ ಮಾಡುವ ಮುನ್ನ ಸಾರ್ವಜನಿಕರು ಅತ್ಯಂತ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಬೆಂಗಳೂರಿನ ಯಶವಂತಪುರ ನಿವಾಸಿ ಹಾಗೂ ಅರಣ್ಯ ಇಲಾಖೆಯ ಉಪ ವಲಯ ಅರಣ್ಯಾಧಿಕಾರಿ (DRFO) ರಮೇಶ್ ಬಾಬು ಬಿ. ಅವರು ಸ್ನೇಹಿತನ ವಾಟ್ಸಾಪ್ ಸಂಖ್ಯೆಯಿಂದ ಬಂದಿದ್ದ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆಯ ಹೆಸರಿನ .APK ಫೈಲ್ನ್ನು ಯಾವುದೇ ಅನುಮಾನವಿಲ್ಲದೆ ತೆರೆಯುತ್ತಿದ್ದಂತೆ, ಕೇವಲ 30 ನಿಮಿಷಗಳಲ್ಲೇ ಅವರ ಬ್ಯಾಂಕ್ ಖಾತೆಯಿಂದ 7 ವಹಿವಾಟುಗಳ ಮೂಲಕ ₹9,96,659 ಹಣ ಸೈಬರ್ ಕಳ್ಳರ ಪಾಲಾಗಿದೆ. ಬಳಿಕ ವಂಚಕರು ಮೊಬೈಲ್ನಲ್ಲಿದ್ದ ಸಂಬಂಧಿತ APK ಫೈಲ್ಗಳನ್ನು ಅಳಿಸಿ ಸಾಕ್ಷಿ ನಾಶಪಡಿಸಿದ್ದು, ವಿಚಾರಣೆಯಲ್ಲಿ ಸ್ನೇಹಿತನ ವಾಟ್ಸಾಪ್ ಖಾತೆಯನ್ನೇ ಹ್ಯಾಕ್ ಮಾಡಿ ಈ ನಕಲಿ ಫೈಲ್ ಕಳುಹಿಸಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ. ಇದೇ ರೀತಿಯ ಫೈಲ್ಗಳನ್ನು ಮತ್ತಿತರ ಸಂಪರ್ಕಗಳಿಗೂ ಕಳುಹಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಈಶಾನ್ಯ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸಾಪ್, ಎಸ್ಎಂಎಸ್ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರುವ .APK ಫೈಲ್ಗಳನ್ನು ಯಾವುದೇ ಕಾರಣಕ್ಕೂ ಡೌನ್ಲೋಡ್ ಮಾಡಬಾರದು ಅಥವಾ ಕ್ಲಿಕ್ ಮಾಡಬಾರದು. ಪರಿಚಿತರಿಂದ ಬಂದಿದ್ದರೂ ಮೊದಲು ಕರೆ ಮಾಡಿ ದೃಢಪಡಿಸಿಕೊಳ್ಳಬೇಕು. ಸೈಬರ್ ವಂಚನೆ ಸಂಭವಿಸಿದರೆ ತಕ್ಷಣವೇ 1930 ಸಹಾಯವಾಣಿಗೆ ಕರೆ ಮಾಡಿ ಬ್ಯಾಂಕ್ ಖಾತೆಯನ್ನು ಫ್ರೀಜ್ ಮಾಡಿಸುವಂತೆ ಪೊಲೀಸರು ಸಲಹೆ ನೀಡಿದ್ದಾರೆ.
