
ಕೊಟ್ಟಿಗೆಹಾರ: ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ 28ನೇ ಘಟಿಕೋತ್ಸವದಲ್ಲಿ ಆಯುರ್ವೇದ ವೈದ್ಯಕೀಯ ಕ್ಷೇತ್ರದ ಕಾಯಚಿಕಿತ್ಸಾ ಸ್ನಾತಕೋತ್ತರ ವಿಭಾಗದಲ್ಲಿ ಕೊಟ್ಟಿಗೆಹಾರದ ಬಿನ್ನಡಿ ನಿವಾಸಿ ಡಾ. ಪೂಜಾ ಬಿ.ಜಿ ಅವರು ಚಿನ್ನದ ಪದಕ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ 28ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಮತ್ತು ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಸಾಧನೆಗೆ ಈ ಗೌರವ ಲಭಿಸಿದ್ದು, ಡಾ. ಪೂಜಾ ಅವರು ತರುವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಸುಶೀಲ ಹಾಗೂ ಗೋಪಾಲ್ ಬಿನ್ನಡಿ ಅವರ ಪುತ್ರಿಯಾಗಿದ್ದಾರೆ. ಅವರ ಈ ಸಾಧನೆ ಕೊಟ್ಟಿಗೆಹಾರ ಹಾಗೂ ಸುತ್ತಮುತ್ತಲಿನ ಪ್ರದೇಶಕ್ಕೆ ಹೆಮ್ಮೆಯ ವಿಷಯವಾಗಿದ್ದು, ಕುಟುಂಬಸ್ಥರು, ಸ್ನೇಹಿತರು, ಬಂಧುಬಳಗ ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.




