
ಕಾರ್ಕಳ: ಮಹಾಭಾರತದಲ್ಲಿ ಬಹುತೇಕ ಎಲ್ಲ ಪಾತ್ರಗಳೂ ನಾಯಕರಂತೆ ವಿಜೃಂಭಿಸಿದರೂ, ಧರ್ಮರಾಜ ಯುಧಿಷ್ಠಿರ ಮಾತ್ರ ಕೆಲವೊಮ್ಮೆ ಮೂಲೆಗುಂಪಾದಂತೆ ಕಾಣುತ್ತಾನೆ. ಆದರೂ ವ್ಯಾಸ ಮಹರ್ಷಿಗಳು ಮಹಾಭಾರತದ ಕೇಂದ್ರಬಿಂದುವಾಗಿ ಧರ್ಮರಾಜನನ್ನೇ ರಾಜನಾಗಿ ಪ್ರತಿಷ್ಠಾಪಿಸಿದ್ದು, ಇಡೀ ಮಹಾಭಾರತದ ಸಾರ ಧರ್ಮವೇ ಆಗಿದೆ ಎಂದು ಖ್ಯಾತ ವಾಗ್ಮಿ ಡಾ. ವಿನಾಯಕ ಭಟ್ ಗಾಳಿಮನೆ ಅಭಿಪ್ರಾಯಪಟ್ಟರು.
ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ 2026ನೇ ಸಾಲಿನ ವರ್ಷಪೂರ್ತಿ ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸ ಮಾಲೆಯ ಆರನೇ ಸೋಪಾನದಲ್ಲಿ ಅವರು ‘ಧರ್ಮ ನಂದನ’ ವಿಷಯದ ಕುರಿತು ಉಪನ್ಯಾಸ ನೀಡಿದರು. ಜೂನ್ 27ರಂದು ಕಾರ್ಕಳದ ಪ್ರಕಾಶ್ ಹೋಟೆಲ್ನ ‘ಸಂಭ್ರಮ’ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು.
ಮಹಾಭಾರತವು ಕೇವಲ ಯುದ್ಧದ ಕಥೆಯಲ್ಲ, ಧರ್ಮ ಮತ್ತು ಅಧರ್ಮಗಳ ನಡುವಿನ ಶಾಶ್ವತ ಸಂಘರ್ಷದ ಬದುಕಿನ ದರ್ಶನವಾಗಿದ್ದು, ಧರ್ಮರಾಜ ಯುಧಿಷ್ಠಿರನ ವ್ಯಕ್ತಿತ್ವವು ಧರ್ಮನಿಷ್ಠೆ, ತಾಳ್ಮೆ, ಕ್ಷಮೆ ಮತ್ತು ನ್ಯಾಯಬದ್ಧ ಬದುಕಿನ ಪ್ರತೀಕವಾಗಿದೆ ಎಂದು ಅವರು ಹೇಳಿದರು.
ಅಧರ್ಮದ ಮೂಲಕ ಸಂಪಾದಿಸುವ ಸಂಪತ್ತು, ಅಧಿಕಾರ, ಕೀರ್ತಿ ಹಾಗೂ ಪ್ರತಿಷ್ಠೆಗಳು ಶಾಶ್ವತವಲ್ಲ. ಧರ್ಮಮಾರ್ಗದಲ್ಲಿ ಗಳಿಸಿದ ಮೌಲ್ಯಗಳು ಮಾತ್ರ ಶಾಶ್ವತವಾಗಿರುತ್ತವೆ ಎಂಬುದನ್ನು ಧರ್ಮರಾಜ ತನ್ನ ಬದುಕಿನ ಮೂಲಕ ತೋರಿಸಿಕೊಟ್ಟಿದ್ದಾನೆ. ಎಂತಹ ಸಂಕಷ್ಟದ ಸಂದರ್ಭದಲ್ಲೂ ಧರ್ಮಪ್ರಜ್ಞೆಯನ್ನು ಕೈಬಿಡದೆ ಬದುಕಿದ ಯುಧಿಷ್ಠಿರ ಪಾಂಡವರ ಏಕತೆಯನ್ನು ಉಳಿಸಿಕೊಂಡಿದ್ದಾನೆ. ಸಂಘರ್ಷವೆಂಬ ಬೆಂಕಿಗೆ ತುಪ್ಪ ಸುರಿದು ವೈಮನಸ್ಸನ್ನು ಬೆಳೆಸಿದ ದುರ್ಯೋಧನನ ವಿರುದ್ಧ ಧರ್ಮರಾಜ ಶಾಂತಿ, ಸಂಯಮ ಹಾಗೂ ಧರ್ಮದ ಮಾರ್ಗವನ್ನು ಅನುಸರಿಸಿ ಸಮಾಜಕ್ಕೆ ಆದರ್ಶ ವ್ಯಕ್ತಿತ್ವವಾಗಿ ಎತ್ತರದಲ್ಲಿ ನಿಂತಿದ್ದಾನೆ ಎಂದು ಅವರು ವಿಶ್ಲೇಷಿಸಿದರು.
ಮಹಾಭಾರತದ ಪ್ರತಿಯೊಂದು ಪಾತ್ರವೂ ಇಂದಿನ ಸಮಾಜಕ್ಕೂ ಪ್ರಸ್ತುತವಾಗಿದ್ದು, ಜೀವನದಲ್ಲಿ ಧರ್ಮದ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ನಿಜವಾದ ಯಶಸ್ಸು ಮತ್ತು ನೆಮ್ಮದಿ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಶ್ರೀಮತಿ ಮಿತ್ರಪ್ರಭಾ ಹೆಗ್ಡೆ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಹಾಗೂ ಅಲ್ಲಮಪ್ರಭು ಪೀಠದ ಪ್ರಧಾನ ನಿರ್ದೇಶಕ ತೆ. ವಿಜಯಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕುಮಾರಿ ಶಾರ್ವರಿ ಪ್ರಾರ್ಥನೆಗೈದರು. ಡಾ. ಮಾಲತಿ ಜಿ. ಪೈ ಕಾರ್ಯಕ್ರಮವನ್ನು ನಿರೂಪಿಸಿ, ಸದಾನಂದ ನಾರಾವಿ ಸ್ವಾಗತಿಸಿದರು, ಶ್ರೀಮತಿ ಸುಲೋಚನಾ ಬಿ.ವಿ. ವಂದಿಸಿದರು.




