
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ನಂಬಿಸಿ ಮಹಿಳೆಯೊಬ್ಬರಿಂದ ₹2.79 ಲಕ್ಷ ಹಣವನ್ನು ವಂಚಿಸಿಕೊಂಡಿರುವ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಸೆಪ್ಟೆಂಬರ್ 16ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅಧಿಕಾರಿ ಎಂದು ಪರಿಚಯಿಸಿಕೊಂಡು, ಕ್ರೆಡಿಟ್ ಕಾರ್ಡ್ಗೆ ಆಫರ್ ಇರುವುದಾಗಿ ತಿಳಿಸಿದ್ದಾರೆ. ಬಳಿಕ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಷನ್ ಮೂಲಕ ಕ್ರೆಡಿಟ್ ಕಾರ್ಡ್ ಸಂಖ್ಯೆ, ಸಿವಿವಿ ಹಾಗೂ ಎಕ್ಸ್ಪೈರಿ ದಿನಾಂಕ ಸೇರಿದಂತೆ ವಿವರಗಳನ್ನು ಅಪ್ಡೇಟ್ ಮಾಡಿಸಿದ್ದಾರೆ. ನಂತರ ಎರಡು ಬಾರಿ ಬಂದ ಒಟಿಪಿಯನ್ನೂ ಅಪ್ಡೇಟ್ ಮಾಡಿಸಿಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಕ್ರೆಡಿಟ್ ಕಾರ್ಡ್ನಿಂದ ₹2,79,281 ಹಣ ಡ್ರಾ ಆಗಿದೆ. ವಂಚನೆ ನಡೆದಿರುವುದು ತಿಳಿದ ತಕ್ಷಣ ಸಂತ್ರಸ್ತೆ ಬ್ಯಾಂಕ್ಗೆ ಕರೆ ಮಾಡಿ ಕಾರ್ಡ್ ಬ್ಲಾಕ್ ಮಾಡಿಸಿದ್ದು, 1930 ಸೈಬರ್ ಸಹಾಯವಾಣಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು, ವಂಚನೆ ನಡೆಸಿದ ವ್ಯಕ್ತಿಯ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.




