
ಚಾಮರಾಜನಗರ: ಭಾರತೀಯ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಜೀವನ ಮೌಲ್ಯಗಳ ಕುರಿತು ಆಳವಾದ ಸಂಶೋಧನೆ ನಡೆಸಿ, ನೈಜ ವಿಚಾರಗಳನ್ನು ಸಾಹಿತ್ಯದ ಮೂಲಕ ದಾಖಲಿಸಿದ ವಿಶ್ವಶ್ರೇಷ್ಠ ಸಾಹಿತಿ ಡಾ. ಎಸ್.ಎಲ್. ಭೈರಪ್ಪನವರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಗೂ ಸಂಸ್ಕೃತಿ ಚಿಂತಕ ಸುರೇಶ್ ಎನ್. ಋಗ್ವೇದಿ ಹೇಳಿದರು. ನಗರದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ. ಎಸ್.ಎಲ್. ಭೈರಪ್ಪನವರ ಪುಣ್ಯಸ್ಮರಣೆ ಹಾಗೂ ಸಾಹಿತ್ಯಿಕ ಕೊಡುಗೆಗಳ ಕುರಿತ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ಭೈರಪ್ಪನವರ ಕೃತಿಗಳನ್ನು ಅಧ್ಯಯನ ಮಾಡುವ ಮೂಲಕ ಭಾರತೀಯ ಸಂಸ್ಕೃತಿ, ಪರಂಪರೆ, ಜೀವನ ಮೌಲ್ಯಗಳು ಹಾಗೂ ತತ್ವಶಾಸ್ತ್ರದ ಕುರಿತು ಆಳವಾದ ಅರಿವು ಪಡೆಯಬಹುದು ಎಂದರು. ಪರ್ವ, ಆವರಣ, ಮಂದ್ರ, ಗೃಹಭಂಗ, ವಂಶವೃಕ್ಷ, ಸಾರ್ಥ, ದಾಟು ಸೇರಿದಂತೆ ಭೈರಪ್ಪನವರ ಕಾದಂಬರಿಗಳು ಭಾರತೀಯ ಸಮಾಜ, ಪರಂಪರೆ ಹಾಗೂ ಜೀವನದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ಅವರ ಸಾಹಿತ್ಯ ಹಲವು ಭಾಷೆಗಳಿಗೆ ಅನುವಾದಗೊಂಡು ವಿಶ್ವದಾದ್ಯಂತ ಓದುಗರನ್ನು ತಲುಪಿದೆ ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ರವಿಚಂದ್ರನ್ ಪ್ರಸಾದ್ ಅವರು ಭೈರಪ್ಪನವರ ಜೀವನ ಹಾಗೂ ಸಾಧನೆಗಳನ್ನು ಪರಿಚಯಿಸಿ, ರಾಮಾಯಣ ಮತ್ತು ಮಹಾಭಾರತದ ಪಾತ್ರಗಳನ್ನು ತಮ್ಮ ಸಾಹಿತ್ಯದ ಮೂಲಕ ಆಳವಾಗಿ ಪರಿಚಯಿಸಿದ ಭೈರಪ್ಪನವರನ್ನು ಸ್ಮರಿಸುವ ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ಸಂಗತಿ ಎಂದರು. ಕಾರ್ಯಕ್ರಮದಲ್ಲಿ ಶಿವಲಿಂಗಮೂರ್ತಿ, ಬಿ.ಕೆ. ಆರಾಧ್ಯ, ಪದ್ಮ ಪುರುಷೋತ್ತಮ, ಕಾಗಲವಾಡಿ ರಂಗಸ್ವಾಮಿ, ನಾಗೇಶ್, ಶಿಕ್ಷಕಿ ಮಾಲಿನಿ, ಆಲೂರು ಮರಿಸ್ವಾಮಿ ಹಾಗೂ ಶ್ರೀಮತಿ ಆರತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




