ಚಿಕ್ಕಮಗಳೂರು: ಕನ್ನಡ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಸುಳ್ಳು ವೈಯಕ್ತಿಕ ಮಾಹಿತಿ ನೀಡಿ, ಮದುವೆಯಾಗುವುದಾಗಿ ನಂಬಿಸಿ ಯುವಕನಿಂದ ₹2.20 ಲಕ್ಷ ಹಾಗೂ ಮೊಬೈಲ್ ಪಡೆದು ವಂಚಿಸಿರುವ ಆರೋಪದ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಯಶವಂತ್ ವಿ. ಎಂಬ 30 ವರ್ಷದ ಯುವಕನ ತಂದೆ ಮದುವೆಗಾಗಿ ಕನ್ನಡ ಮ್ಯಾಟ್ರಿಮೋನಿಯಾದಲ್ಲಿ ಬಯೋಡೇಟಾ ಅಪ್ಲೋಡ್ ಮಾಡಿದ್ದರು. ಬಳಿಕ ದೀಕ್ಷಿತಾ ಎಂಬ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಸಂಪರ್ಕಿಸಿ, ಯುವಕನೊಂದಿಗೆ ಪರಿಚಯ ಬೆಳೆಸಿಕೊಂಡಿದ್ದರು. ನಂತರ ವೈಯಕ್ತಿಕ ಸಮಸ್ಯೆಗಳು ಹಾಗೂ ಹಣದ ಅಗತ್ಯವಿದೆ ಎಂದು ಹೇಳಿ, ಮದುವೆಯಾಗುವುದಾಗಿ ನಂಬಿಸಿ ಹಂತ ಹಂತವಾಗಿ ₹2.20 ಲಕ್ಷ ಹಣವನ್ನು ಆನ್ಲೈನ್ ಮೂಲಕ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದಲ್ಲದೆ, ವಿಡಿಯೋ ಕಾಲ್ನಲ್ಲಿ ಮಾತನಾಡಲು ಮೊಬೈಲ್ ಬೇಕೆಂದು ಹೇಳಿ ಸ್ಮಾರ್ಟ್ಫೋನ್ ಕೂಡ ಪಡೆದುಕೊಂಡಿದ್ದಾರೆ. ಬಳಿಕ ಭೇಟಿಯಾಗಲು ಹಲವು ಬಾರಿ ಹೇಳಿದರೂ ಬರದೇ ಇದ್ದ ಹಿನ್ನೆಲೆಯಲ್ಲಿ ಯುವಕನಿಗೆ ಅನುಮಾನ ಮೂಡಿದೆ. ನಂತರ ವಿಡಿಯೋ ಕಾಲ್ನಲ್ಲಿ ಮಾತನಾಡಿದಾಗ, ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ನೀಡಿದ್ದ ಮಾಹಿತಿ ಸುಳ್ಳಾಗಿರಬಹುದು ಎಂದು ತಿಳಿದುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಸೈಬರ್ ಕ್ರೈಂ ಪೊಲೀಸರು ಐಟಿ ಕಾಯ್ದೆ 66(D) ಹಾಗೂ BNS 318(4) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
