
ಚಿಕ್ಕಮಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ಗೆ ಅವಕಾಶ ನೀಡಿ ಕೇಸರಿಗೆ ಅವಕಾಶ ನೀಡದ ಸರ್ಕಾರದ ನಿಲುವಿನ ವಿರುದ್ಧ ಬಿಜೆಪಿ ಶಾಸಕ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದರು. 1969ರಿಂದಲೇ ವಿದ್ಯಾರ್ಥಿಗಳಲ್ಲಿ ಬೇಧಭಾವ ಇರಬಾರದು ಎಂಬ ಉದ್ದೇಶದಿಂದ ಶಾಲಾ-ಕಾಲೇಜುಗಳಲ್ಲಿ ವಸ್ತ್ರಸಂಹಿತೆ ಹಾಗೂ ಯೂನಿಫಾರಂ ಕಡ್ಡಾಯಗೊಳಿಸಲಾಗಿತ್ತು. ಆದರೆ ಈಗ ಸರ್ಕಾರ ಮತೀಯ ಚಿಹ್ನೆಗಳನ್ನು ಬಳಸಲು ಅವಕಾಶ ನೀಡಿದ್ದು, ಹಾಗಾದರೆ ಮತೀಯ ಚಿಹ್ನೆಯೂ ಯೂನಿಫಾರಂ ಭಾಗವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಪ್ರಶ್ನಿಸಿದರು. ಮತೀಯ ಚಿಹ್ನೆ ಬೇರೆ, ಸಂಸ್ಕೃತಿಯ ಚಿಹ್ನೆ ಬೇರೆ ಎಂದು ಹೇಳಿದ ಅವರು, ಹಿಜಾಬ್ ಮತೀಯ ಚಿಹ್ನೆಯಾ ಅಥವಾ ಸಂಸ್ಕೃತಿಯ ಚಿಹ್ನೆಯಾ ಎಂಬುದನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಲಿ ಎಂದರು. ಹಿಜಾಬ್ ಬೇಡ ಎಂದು ನಾವು ಹೇಳುತ್ತಿಲ್ಲ, ಆದರೆ ಶಾಲೆಗಳಲ್ಲಿ ಹಿಜಾಬ್ ಇರಬೇಕಾ ಅಥವಾ ಯೂನಿಫಾರಂ ಇರಬೇಕಾ ಎಂಬ ಪ್ರಶ್ನೆ ಉದ್ಭವಿಸಿದೆ. ಹಿಜಾಬ್ ಯೂನಿಫಾರಂ ಭಾಗವಾಗಿರದಿದ್ದರೆ ಅದರ ಬಳಕೆಯನ್ನು ಸರ್ಕಾರ ಹೇಗೆ ಸಮರ್ಥಿಸಿಕೊಳ್ಳುತ್ತದೆ ಎಂದು ಪ್ರಶ್ನಿಸಿದ ಅವರು, ಕೇಸರಿ ಧಾರ್ಮಿಕ ಚಿಹ್ನೆಯಲ್ಲ ಎಂದು ಹೇಳುವ ಅಧಿಕಾರ ಸರ್ಕಾರಕ್ಕೆ ಯಾರು ಕೊಟ್ಟಿದ್ದಾರೆ, ನೀವು ಧಾರ್ಮಿಕ ಪಂಡಿತರಾ ಎಂದು ಟೀಕಿಸಿದರು. ಹಿಜಾಬ್ಗೆ ಅವಕಾಶ ನೀಡಿ ಕೇಸರಿಗೆ ಅವಕಾಶ ನೀಡದಿದ್ದರೆ ಅದರ ಅರ್ಥವೇನು ಎಂದು ಪ್ರಶ್ನಿಸಿದ ಅವರು, ಯಾರಾದರೂ ಕೇಸರಿ ಬಣ್ಣದ ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ಅವರನ್ನು ಹೊರಗಡೆ ಕಳಿಸುತ್ತೀರಾ ಎಂದು ಸರ್ಕಾರವನ್ನು ಪ್ರಶ್ನಿಸಿದರು. ಕೇಸರಿ, ಹಸಿರು, ನೀಲಿ, ಬಿಳಿ ಯಾವುದಾದರೂ ಧರಿಸಿ ಬನ್ನಿ ಎಂದಿದ್ದರೆ ಸರ್ಕಾರಕ್ಕೆ ಬಣ್ಣಗಳ ಬಗ್ಗೆ ದ್ವೇಷ ಇಲ್ಲ ಎಂಬ ಸಂದೇಶ ಹೋಗುತ್ತಿತ್ತು ಎಂದರು. ನಮ್ಮ ಮಠಾಧೀಶರು ಕೂಡ ಕೇಸರಿ ಬಣ್ಣವನ್ನೇ ಬಳಸುತ್ತಾರೆ, ನಾಳೆ ಶಬರಿಮಲೆ ಮಾಲೆ ಅಥವಾ ದತ್ತಮಾಲೆ ಧರಿಸಿದವರನ್ನೂ ಹೊರಗಡೆ ಇಡುತ್ತೀರಾ ಎಂದು ಪ್ರಶ್ನಿಸಿದರು. ಹಿಜಾಬ್ ಯೂನಿಫಾರಂ ಭಾಗವಾಗಿದ್ದರೆ ಧರಿಸಿಕೊಂಡು ಬರಲಿ, ಇಲ್ಲವಾದರೆ ಅನುಮತಿ ನೀಡಬಾರದು ಎಂದು ಹೇಳಿದರು. 1960ರ ದಶಕದ ಸದುದ್ದೇಶಕ್ಕೆ ಕಾಂಗ್ರೆಸ್ ಸರ್ಕಾರ ತಿಲಾಂಜಲಿ ಇಡುತ್ತಿದ್ದು, ಮತೀಯವಾದಿಗಳ ಒತ್ತಡಕ್ಕೆ ಮಣಿದಿದೆ ಎಂದು ಆರೋಪಿಸಿದರು. ನಾಳೆ ತಾಲಿಬಾನಿಗಳು ಬುರ್ಕಾವೇ ಯೂನಿಫಾರಂ ಎಂದರೆ ಏನು ಮಾಡುತ್ತೀರಾ ಎಂದು ಪ್ರಶ್ನಿಸಿದ ಅವರು, ವಿದ್ಯಾರ್ಥಿಗಳ ಮನಸ್ಸಿನಲ್ಲಿ ಸಮಾನತೆ ಬದಲು ಮತೀಯ ವಿಭಜನೆ ಬಿತ್ತಲಾಗುತ್ತಿದೆ. ರಾಷ್ಟ್ರವನ್ನು ವಿಭಜಿಸಿದಂತೆ ಈಗ ಶಾಲೆಗಳಲ್ಲಿಯೂ ಮತೀಯ ವಿಭಜನೆ ಮಾಡಲು ಸರ್ಕಾರ ಮುಂದಾಗಿದೆ ಎಂದು ಚಿಕ್ಕಮಗಳೂರಿನಲ್ಲಿ ಬಿಜೆಪಿ ಶಾಸಕ ಸಿ.ಟಿ. ರವಿ ಆರೋಪಿಸಿದರು.


