
ಚಿಕ್ಕಮಗಳೂರು: ಖಾತೆ ಬದಲಾವಣೆಗೆ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಕಂದಾಯ ಇಲಾಖೆ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಲಿಂಗದಹಳ್ಳಿ ನಾಡಕಚೇರಿಯಲ್ಲಿ ನಡೆದಿದೆ. ರೆವೆನ್ಯೂ ಇನ್ಸ್ಪೆಕ್ಟರ್ ರಮೇಶ್ ರೈತನಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿಯಲ್ಲಿ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಖಾತೆ ಬದಲಾವಣೆಗೆ 30 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಗೆ ಲಂಚ ನೀಡಲು ನಿರಾಕರಿಸಿದ್ದ ರೈತ ಲೋಕಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆ ಇಂದು ಲಿಂಗದಹಳ್ಳಿ ನಾಡಕಚೇರಿ ಆವರಣದಲ್ಲಿ ಲೋಕಾಯುಕ್ತ ಡಿವೈಎಸ್ಪಿ ತಿರುಮಲೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತರ ತಂಡ ಆರೋಪಿಯನ್ನು ಬಲೆಗೆ ಬೀಳಿಸಿದ್ದು, ಆರೋಪಿಯಿಂದ ಲಂಚದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಬಳಿಕ ಬಂಧಿತ ಅಧಿಕಾರಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿರುವ ಅಧಿಕಾರಿಗಳು ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




