
ಚಾಮರಾಜನಗರ: ಗಡಿಭಾಗದ ಸವಾಲುಗಳು ನಿರಂತರ, ಗಡಿ ಜನರು ಸೂಕ್ಷ್ಮತೆಯಿಂದ ಸಂವೇದನಾಶೀಲರಾಗಿ ಪ್ರೀತಿ ವಿಶ್ವಾಸ ಸಹೋದರತೆಯಿಂದ ಬದುಕಿ ಜೀವನವನ್ನು ಸುಂದರಮಯಗೊಳಿಸಿಕೊಳ್ಳಬೇಕಾಗಿದ್ದು, ಘರ್ಷಣೆಗೆ ಅವಕಾಶ ಆಗಬಾರದು. ಗಡಿ ಪ್ರದೇಶದ ಸವಾಲುಗಳನ್ನು ಪರಿಹರಿಸುವುದು ಕಷ್ಟ ಸಾಧ್ಯ, ಗಡಿ ಭಾಗದ ನಿರಂತರ ಸಮಸ್ಯೆಗಳಾದ ಶಿಕ್ಷಣ, ಅಭಿವೃದ್ಧಿ, ಉದ್ಯೋಗ, ಭೂಮಿ ಸಮಸ್ಯೆ, ಬಗೆಹರಿಸಿ, ಸಂಸ್ಕೃತಿ ಕಲೆ, ಸಾಹಿತ್ಯ, ಸಂಗೀತ, ಜನಪದ, ನೃತ್ಯ, ಪರಂಪರೆ, ಕಲೆಗಳನ್ನು ಉಳಿಸುವ ಮೂಲಕ ಕನ್ನಡಿಗರ ಅಭಿವೃದ್ಧಿಗೆ ಶ್ರಮಿಸುವುದು ನಮ್ಮೆಲ್ಲರ ಕರ್ತವ್ಯವೆಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ರಂಗದೇವಿಗೆ ಕನ್ನಡ ಸಂಸ್ಕೃತಿ ಇಲಾಖೆ, ಚಾಮರಾಜನಗರ ಪುಣಜನೂರು ಗ್ರಾಮ ಪಂಚಾಯಿತಿ ಸ್ವಾತಂತ್ರ ಅಮೃತ ಮಹೋತ್ಸವದ ಸವಿನೆನಪಿನಲ್ಲಿ ಹಮ್ಮಿಕೊಂಡಿದ್ದ ಗಡಿನಾಡ ಸಾಂಸ್ಕೃತಿಕ ಉತ್ಸವದ ವಿಚಾರ ಸಂಕೀರಣದಲ್ಲಿ ಗಡಿ ಪ್ರದೇಶದ ಸವಾಲುಗಳು ಮತ್ತು ಸಾಂಸ್ಕೃತಿಕ ಅನನ್ಯತೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಕನ್ನಡ ಕನ್ನಡಿಗ ಕರ್ನಾಟಕ ವಿಶಾಲ ವ್ಯಾಪ್ತಿಯದು. ಚಾಮರಾಜನಗರ ಜಿಲ್ಲೆ ತಮಿಳುನಾಡು ಮತ್ತು ಕೇರಳದ ಸರಹದ್ದಿನಲ್ಲಿರುವ ಜಿಲ್ಲೆಯಾಗಿದ್ದು, ಇಲ್ಲಿನ ಸಮಸ್ಯೆಗಳು ಹಲವಾರು ದಶಕಗಳಿಂದಲೂ ನಿರಂತರವಾಗಿದೆ. ಗಡಿಭಾಗದ ಜನ ಬಹಳ ಸೂಕ್ಷ್ಮವಾಗಿ, ಸಂವೇದನಾಶೀಲರಾಗಿ ಬದುಕಬೇಕಾಗಿದ್ದು, ಪರಸ್ಪರ ಸಹಕಾರ, ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಸಹೋದರ ಭಾವನೆಯಿಂದ ಬದುಕಿದಾಗ ಮಾತ್ರ ನಮ್ಮ ಸಮಸ್ಯೆಗಳು ಪರಿಹಾರವಾಗುತ್ತದೆ. ಗಡಿ ಪ್ರದೇಶದ ಸವಾಲುಗಳು ನಿರಂತರವಾದದ್ದು, ಸಾಂಸ್ಕೃತಿಕ ಭಿನ್ನತೆಯ ನಡುವೆ ಸಮನ್ವಯತೆಯನ್ನು ಕಾಪಾಡಿಕೊಂಡು ಉಳಿಸಿ ಬೆಳೆಸುವ ಕೆಲಸವನ್ನು ಸರ್ಕಾರ ಹಾಗೂ ಸಂಘ ಸಂಸ್ಥೆಗಳು ಮಾಡಬೇಕು. ಕನ್ನಡಿಗರ ಏಳಿಗೆ ಮೂಲಕ ಭವಿಷ್ಯದ ಪೀಳಿಗೆಗೆ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು. ವಿಚಾರ ಮಂಡನೆಯನ್ನು ನಂಜನಗೂಡು ಜೆಎಸ್ಎಸ್ ಕಾಲೇಜಿನ ಪ್ರಾಚಾರ್ಯ ಹಾಗೂ ಸಾಹಿತಿ ಕೊತ್ತಲವಾಡಿ ಶಿವಕುಮಾರ ಮಾತನಾಡಿ ಗಡಿ ಪ್ರದೇಶದಲ್ಲಿ ಭಾಷೆಯ ಸಮಸ್ಯೆ ವೈದ್ಯಕೀಯ ಸಮಸ್ಯೆ, ಶಿಕ್ಷಣ, ಉದ್ಯೋಗ, ಭೂಮಿ, ಸಾಂಸ್ಕೃತಿಕ ಭಿನ್ನತೆಯ ಸವಾಲುಗಳು ಇದೆ. ಸರ್ಕಾರ ಗಡಿ ಪ್ರದೇಶದ ಗ್ರಾಮೀಣ ಪ್ರದೇಶದ ಜನರಿಗೆ ವಿಶೇಷವಾದ ಜಾಗೃತಿ ಅರಿವು, ಸರಳ ಕಾನೂನುಗಳ ಮೂಲಕ ಅಭಿವೃದ್ಧಿಪಡಿಸಬೇಕು. ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನೂರಾರು ಹಳ್ಳಿಗಳು ಅರಣ್ಯ ಪ್ರದೇಶ ಹಾಗೂ ತಮಿಳುನಾಡು ಕೇರಳದ ಅಂಚಿನಲ್ಲಿ ಇದೆ ಇಂದಿಗೂ ಕೆಲವು ಪ್ರದೇಶಗಳು ಸಾಂಸ್ಕೃತಿಕ ಭಿನ್ನತೆಯಿಂದ ಕೂಡಿವೆ. ಸವಾಲುಗಳನ್ನು ಎದುರಿಸಿ ಪರಿಹರಿಸುವ ದಿಕ್ಕಿನಲ್ಲಿ ಪ್ರಯತ್ನ ಆಗಲೇಬೇಕು. ಸಾಂಸ್ಕೃತಿಕವಾಗಿ ರೂಢಿಯ ಸಂಪ್ರದಾಯ ಆಚರಣೆಗಳು ಕಲೆ, ಸಾಹಿತ್ಯ, ಸಂಗೀತದ ವಿವಿಧ ರೂಪಗಳು, ಜನಪದದ ವಿಭಿನ್ನತೆ ಗಡಿ ಭಾಗದಲ್ಲಿ ಕಾಣಬಹುದು. ಗಡಿನಾಡ ಸಾಂಸ್ಕೃತಿಕ ಉತ್ಸವದ ಮೂಲಕ ಜನರಲ್ಲಿ ಸ್ಪೂರ್ತಿ ಸಂತೋಷ ಹಾಗೂ ಕನ್ನಡಿಗರ ಎಲ್ಲರೂ ನಮ್ಮೊಂದಿಗೆ ಇದ್ದಾರೆ ಎಂಬ ಭಾವನೆ ಮೂಡುತ್ತದೆ. ಸರ್ಕಾರಗಳು, ಸಂಘ ಸಂಸ್ಥೆಗಳು ನಿರಂತರವಾಗಿ ಗಡಿಭಾಗದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿ ಜನರಲ್ಲಿ ಭಾಷೆಯ ಮಹತ್ವ ಹಾಗೂ ಉಳಿಸುವ ಬಗ್ಗೆ ಚಿಂತನೆಯನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು. ಗಡಿ ಭಾಗದ ಹೋರಾಟಗಾರರು ಪರಿಸರವಾದಿಗಳಾದ ಶ್ರೀ ಪುಣಜನೂರು ದೊರೆ ಸ್ವಾಮಿಯವರು ಮಾತನಾಡಿ ಗಡಿ ಭಾಗದಲ್ಲಿ ಸಾವಿರಾರು ಎಕರೆ ಭೂಮಿ ಅರಣ್ಯ ಪ್ರದೇಶದ ವ್ಯಾಪ್ತಿಗೆ ಸೇರಿದ್ದು ಆ ಪ್ರದೇಶಗಳಲ್ಲಿ ಹಕ್ಕು ಪತ್ರಗಳನ್ನು ನೀಡಿ ಜನ ನೆಮ್ಮದಿಯ ವಾತಾವರಣದಲ್ಲಿ ಬದುಕಲು ಅವಕಾಶ ನೀಡಬೇಕು. ಅರಣ್ಯದಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ಕೊನೆಗೊಳಿಸುವ ದಿಕ್ಕಿನಲ್ಲಿ ಗಡಿಭಾಗದ ಸರ್ಕಾರಗಳು ಯೋಚನೆ ಮಾಡಬೇಕು, ಹಕ್ಕು ಪತ್ರ ವಿತರಣೆಯ ಮೂಲಕ ಕನ್ನಡಿಗರಿಗೆ ಶಾಶ್ವತವಾದ ಕಾರ್ಯವನ್ನು ಮಾಡಿದಾಗ ಸಂಸ್ಕೃತಿ ಉತ್ಸವಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದ್ದು, ಕಾರ್ಯಕ್ರಮದಲ್ಲಿ ರಂಗದೀವಿಗೆ ಅಧ್ಯಕ್ಷರಾದ ಕಲೆ ನಟರಾಜು, ರಂಗನಾಥ, ರಂಗಭೂಮಿ ಕಲಾವಿದ ಶಿವಶಂಕರ್ ಚಟ್ಟು ಕೂಡ ಇದ್ದರು.




