
ಚಿಕ್ಕಮಗಳೂರು: ನಗರದಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆ ಹಾಗೂ ಬಿರುಗಾಳಿಯಿಂದ ನಗರದಾದ್ಯಂತ ಭಾರೀ ಅವಾಂತರಗಳು ಸೃಷ್ಟಿಯಾಗಿವೆ. ಗಾಳಿ-ಮಳೆಯ ಅಬ್ಬರಕ್ಕೆ ಹಲವು ಬೃಹತ್ ಮರಗಳು ಮತ್ತು ವಿದ್ಯುತ್ ಕಂಬಗಳು ಧರೆಗುರುಳಿದ್ದು, ಕೋಟೆ ಬಡಾವಣೆಯಲ್ಲಿ ಮರಗಳು ಉರುಳಿ ಬಿದ್ದಿರುವುದರ ಜೊತೆಗೆ ಮನೆಗಳ ಮೇಲ್ಛಾವಣಿಯ ಹೆಂಚುಗಳು ಹಾರಿ ಹೋಗಿವೆ. ನಗರದ ಕೋರ್ಟ್ ಮುಂಭಾಗ ಹತ್ತಾರು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಐಬಿ ಕಚೇರಿ ಮುಂಭಾಗದ ಕಾಂಪೌಂಡ್ ಕೂಡ ಕುಸಿದಿದೆ. ನಗರದ ವಿವಿಧ ಭಾಗಗಳಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗೆ ಬಿದ್ದ ಪರಿಣಾಮ ಸಂಚಾರ ಮತ್ತು ಸಾರ್ವಜನಿಕ ಜೀವನ ಅಸ್ತವ್ಯಸ್ತಗೊಂಡಿದ್ದು, ಚಿಕ್ಕಮಗಳೂರು ನಗರದ ಅರ್ಧ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಜನರು ಸಂಕಷ್ಟ ಅನುಭವಿಸುವಂತಾಗಿದೆ.




