ಚಿಕ್ಕಮಗಳೂರು: ಚಿಕ್ಕಮಗಳೂರು ನಗರದ ಸರ್ಕಾರಿ ಜಿಲ್ಲಾ ಹೆರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ತಿಂಗಳ ಹಸುಗೂಸು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಪೋಷಕರು ಹಾಗೂ ಕುಟುಂಬಸ್ಥರು ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಅರವಿಂದ ನಗರ ನಿವಾಸಿಗಳಾದ ರವೀಶ್ ಹಾಗೂ ತೇಜಸ್ವಿನಿ ದಂಪತಿಯ ಮೂರು ತಿಂಗಳ ಮಗುವಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ರಕ್ತದ ಪ್ರಮಾಣ ಕಡಿಮೆಯಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದರು.
ಆದರೆ ಚಿಕಿತ್ಸೆ ಬಳಿಕ ಗುರುವಾರ ಬೆಳಿಗ್ಗೆ ಮಗು ಆರೋಗ್ಯವಾಗಿದ್ದು ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ತಿಳಿಸಿದ್ದರೆಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಬೆಳಗ್ಗೆ ಸುಮಾರು 11 ಗಂಟೆಯ ವೇಳೆಗೆ ತಕ್ಷಣ ಹಾಸನಕ್ಕೆ ಕರೆದೊಯ್ಯುವಂತೆ ಸೂಚನೆ ನೀಡಲಾಗಿದ್ದು, ಅದರಂತೆ ಮಗುವನ್ನು ಕರೆದುಕೊಂಡು ತೆರಳುತ್ತಿದ್ದ ವೇಳೆ ಬೇಲೂರು ಸಮೀಪ ಮಾರ್ಗ ಮಧ್ಯೆಯೇ ಮಗು ತೀವ್ರ ಅಸ್ವಸ್ಥಗೊಂಡು ಮೃತಪಟ್ಟಿದೆ ಎಂದು ತಿಳಿದುಬಂದಿದೆ.
ಘಟನೆಯ ಬಳಿಕ ಆಸ್ಪತ್ರೆ ಎದುರು ಜಮಾಯಿಸಿದ ಕುಟುಂಬಸ್ಥರು ಹಾಗೂ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯವೇ ಮಗುವಿನ ಸಾವಿಗೆ ಕಾರಣ ಎಂದು ಆರೋಪಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ಸತ್ಯಾಸತ್ಯತೆ ಬೆಳಕಿಗೆ ತಂದು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೋಷಕರು ಒತ್ತಾಯಿಸಿದ್ದಾರೆ.
