
ಬೆಂಗಳೂರು : ನೀಟ್ ಯುಜಿ 2026 ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಅಧಿಕೃತವಾಗಿ ರದ್ದುಪಡಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ವಿಚಾರಕ್ಕೆ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ. ಎಂಸಿ ಸುಧಾಕರ್ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದೊಂದು ಆಘಾತಕಾರಿ ಮತ್ತು ಆತಂಕಕಾರಿ ಬೆಳವಣಿಗೆ ಎಂದು ಹೇಳಿರುವ ಸುಧಾಕರ್, ವಿದ್ಯಾರ್ಥಿಗಳು ವರ್ಷಪೂರ್ತಿ ತಯಾರಿ ನಡೆಸಿ ಪರೀಕ್ಷೆ ಬರೆಯುವಾಗ ಪದೇ ಪದೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗುತ್ತಿರುವುದು NTA ವೈಫಲ್ಯವೇ ಎಂಬ ಪ್ರಶ್ನೆ ಮೂಡಿಸುತ್ತಿದೆ ಎಂದು ಕಿಡಿಕಾರಿದ್ದು, ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷಾ ವ್ಯವಸ್ಥೆಯ ಅಗತ್ಯವೇನು ಎಂಬ ಚರ್ಚೆ ಆರಂಭವಾಗಿದೆ ಎಂದು ಹೇಳಿದ್ದಾರೆ. ತನಿಖೆಯಲ್ಲಿ ಸೋರಿಕೆ ಸಾಬೀತಾದ ಬಳಿಕ ಪರೀಕ್ಷೆ ರದ್ದು ಮಾಡಲಾಗಿದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ರಾಜ್ಯಗಳಿಗೆ ಜವಾಬ್ದಾರಿ ನೀಡಬೇಕೆಂದು ಆಗ್ರಹಿಸಿದ್ದು, ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕರಣ ಮಾಡದೇ ಹೋದರೆ ಮೆರಿಟ್ಗೆ ಬೆಲೆ ಉಳಿಯದು ಎಂದು ಎಚ್ಚರಿಸಿದ್ದಾರೆ. ಇತ್ತ ಮಧು ಬಂಗಾರಪ್ಪ ಕೂಡ ಕೇಂದ್ರ ಆಡಳಿತದ ವಿರುದ್ಧ ತೀವ್ರ ಟೀಕೆ ನಡೆಸಿ, ಸತತ ಎರಡನೇ ವರ್ಷವೂ ಇಂತಹ ಅವ್ಯವಸ್ಥೆ ನಡೆಯುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ, ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆ ಅಥವಾ ಪ್ರಧಾನಿ ರಾಜೀನಾಮೆ ಕೇಳುವ ಧೈರ್ಯ ಬಿಜೆಪಿ ತೋರಿಸುತ್ತದೆಯೇ ಎಂಬ ಪ್ರಶ್ನೆಯನ್ನೂ ಸುಧಾಕರ್ ಎತ್ತಿದ್ದಾರೆ. ಎನ್ಟಿಎ ಪ್ರಕಾರ, ಪರೀಕ್ಷೆಯಲ್ಲಿ ಅಕ್ರಮ ಹಾಗೂ ಪಾರದರ್ಶಕತೆ ಕುರಿತ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಹೊಸ ದಿನಾಂಕ ಪ್ರಕಟಿಸುವುದಾಗಿ ತಿಳಿಸಿದೆ.





