
ಭಾರತೀಯ ನೌಕಾಪಡೆಯಲ್ಲಿ ಉದ್ಯೋಗ ಅರಸುತ್ತಿರುವ ಯುವಕರಿಗೆ ಸುವರ್ಣಾವಕಾಶ ದೊರೆತಿದ್ದು, ಕೇರಳದಲ್ಲಿರುವ ಪ್ರತಿಷ್ಠಿತ ಭಾರತೀಯ ನೌಕಾ ಅಕಾಡೆಮಿ (INA) 2027ರ ಜನವರಿ ಬ್ಯಾಚ್ಗಾಗಿ ಮಾಹಿತಿ ತಂತ್ರಜ್ಞಾನ (IT) ವಿಭಾಗದಲ್ಲಿ ಶಾರ್ಟ್ ಸರ್ವಿಸ್ ಕಮಿಷನ್ (SSC) ಅಧಿಕಾರಿಗಳ 15 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ಪದವಿ ಅಂಕಗಳ ಆಧಾರದ ಮೇಲೆ ನೇರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳು 10ನೇ ತರಗತಿ ಅಥವಾ ಇಂಟರ್ಮೀಡಿಯೇಟ್ ಹಂತದಲ್ಲಿ ಇಂಗ್ಲಿಷ್ ವಿಷಯದಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆದಿರಬೇಕು. ಜೊತೆಗೆ ಕಂಪ್ಯೂಟರ್ ಸೈನ್ಸ್, ಐಟಿ, ಸಾಫ್ಟ್ವೇರ್ ಸಿಸ್ಟಮ್ಸ್, ಡೇಟಾ ಅನಾಲಿಟಿಕ್ಸ್ ಅಥವಾ ಎಐ ವಿಷಯಗಳಲ್ಲಿ ಬಿಇ, ಬಿಟೆಕ್, ಬಿಸಿಎ ಅಥವಾ ಎಂಸಿಎ ಪದವಿಯನ್ನು ಶೇ.60 ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು. 2002ರ ಜನವರಿ 1 ರಿಂದ 2007ರ ಜುಲೈ 1ರೊಳಗೆ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅಂತಿಮ ವರ್ಷದ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗಿದೆ. ಪದವಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ ಸಂದರ್ಶನ, ವೈದ್ಯಕೀಯ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆ ಬಳಿಕ ಅಂತಿಮ ಆಯ್ಕೆ ಮಾಡಲಾಗುತ್ತದೆ. ಎನ್ಸಿಸಿ ‘C’ ಪ್ರಮಾಣಪತ್ರ ಹೊಂದಿರುವವರಿಗೆ ಕಟ್ಆಫ್ ಅಂಕಗಳಲ್ಲಿ ಶೇ.5ರಷ್ಟು ಆದ್ಯತೆ ದೊರೆಯಲಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ಅಂದಾಜು ರೂ.56,100 ಆರಂಭಿಕ ವೇತನದೊಂದಿಗೆ ವಿವಿಧ ಸರ್ಕಾರಿ ಭತ್ಯೆಗಳು ಹಾಗೂ ಸೌಲಭ್ಯಗಳು ಲಭ್ಯವಾಗಲಿದ್ದು, ಕೇರಳದ ಎಜಿಮಲಾದಲ್ಲಿ 6 ವಾರಗಳ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಮದುವೆಯಾಗಲು ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. ಆರಂಭಿಕ ಸೇವಾ ಅವಧಿ 10 ವರ್ಷಗಳಾಗಿದ್ದು, ಅಗತ್ಯಕ್ಕೆ ಅನುಗುಣವಾಗಿ ಇನ್ನೂ 4 ವರ್ಷ ವಿಸ್ತರಿಸಬಹುದಾಗಿದೆ. ಆಸಕ್ತ ಅಭ್ಯರ್ಥಿಗಳು ಮೇ 16ರಿಂದ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಜೂನ್ 1 ಕೊನೆಯ ದಿನಾಂಕವಾಗಿದೆ.







