
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡಿನಲ್ಲಿ ಮೂಡಿಗೆರೆ ತಾಲೂಕಿನ ಗೌಡಳ್ಳಿ ಸಮೀಪದ ಬಿಳ್ಳೂರು ಬಳಿ ಮಳೆಯಿಂದಾಗಿ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಭಾರೀ ಬೆಂಕಿ ಕಾಣಿಸಿಕೊಂಡ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಸ್ಥಳೀಯರು ಅಪಾಯವಿದೆ ಎಂದು ಎಚ್ಚರಿಕೆ ನೀಡಿದ್ದರೂ ಕೆಲ ಬೈಕ್ ಸವಾರರು ನಿರ್ಲಕ್ಷ್ಯದಿಂದ ಕಂಬದ ಸಮೀಪದಲ್ಲೇ ಸಾಗಿದ್ದು, ಅವರು ಹಾದುಹೋಗುತ್ತಿದ್ದ ಕ್ಷಣದಲ್ಲೇ ವಿದ್ಯುತ್ ಕಂಬ ಭಾರೀ ಸದ್ದಿನೊಂದಿಗೆ ಸಿಡಿದ ಘಟನೆ ನಡೆದಿದೆ, ಈ ದೃಶ್ಯವು ಮತ್ತೊಬ್ಬ ಪ್ರಯಾಣಿಕನ ಮೊಬೈಲ್ನಲ್ಲಿ ಸೆರೆಯಾಗಿದ್ದು, ವಿದ್ಯುತ್ ತಂತಿ ಬೈಕ್ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ತಿಳಿದುಬಂದಿದೆ, ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೇ ಸವಾರರು ಪಾರಾಗಿದ್ದಾರೆ ಹಾಗೂ ಮಳೆಗಾಲದಲ್ಲಿ ಇಂತಹ ಅಪಾಯಕಾರಿ ಸ್ಥಳಗಳಲ್ಲಿ ಸಾಹಸ ಪ್ರದರ್ಶನ ಮಾಡದೇ ಸುರಕ್ಷತೆ ಪಾಲಿಸುವಂತೆ ಎಚ್ಚರಿಕೆ ನೀಡಲಾಗಿದೆ.




