
ಕೊಟ್ಟಿಗೆಹಾರ: ಕುಟುಂಬದಲ್ಲಿ ಪ್ರೀತಿ, ಏಕತೆ ಹಾಗೂ ದೀನತೆಯಿಂದ ಬದುಕುವುದೇ ಯೇಸು ಕ್ರಿಸ್ತರ ಸಂದೇಶವಾಗಿದೆ ಎಂದು ರಾಯಚೂರಿನ ಜವಳಗೇರಾ ಸಂತ ಪ್ರಾನ್ಸಿಸ್ ಚರ್ಚಿನ ಧರ್ಮಗುರು ಫಾ.ಅಲ್ಪೋನ್ಸ್ ಜಾರ್ಜ್ ಹೇಳಿದರು. ಕೊಟ್ಟಿಗೆಹಾರದ ಸೆಕ್ರೆಡ್ ಹಾರ್ಟ್ ಚರ್ಚ್ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿ, ಕುಟುಂಬದಲ್ಲಿ ದೇವರ ಕೃಪಾವರಗಳನ್ನು ನಿತ್ಯ ನೆನೆಸಿ ಐಕ್ಯತೆಯಿಂದ ಜೀವನ ಸಾಗಿಸಬೇಕು, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ ಹಿರಿಯರನ್ನು ಗೌರವಿಸುವ ಪರಂಪರೆ ಬೆಳೆಸಿಕೊಳ್ಳಬೇಕು, ಆಗ ಮಾತ್ರ ಯೇಸುವಿನ ಪವಿತ್ರ ಹೃದಯದ ಪ್ರೀತಿ ದೊರೆಯುತ್ತದೆ ಎಂದರು. ಇದೇ ವೇಳೆ ಕೊಟ್ಟಿಗೆಹಾರ ಚರ್ಚ್ ಧರ್ಮಗುರು ಫಾ.ವಿಲಿಯಂ ಬೆರ್ನಾಡ್ ಸಂದೇಶ ನೀಡಿ, ಯೇಸುವಿನ ಪವಿತ್ರ ಹೃದಯದ ಹಬ್ಬವು ಅವರ ಅಪಾರ ಪ್ರೀತಿ, ದಯೆ ಮತ್ತು ಕರುಣೆಯನ್ನು ನೆನಪಿಸುವ ದಿನವಾಗಿದ್ದು, ದೇವರ ಮನುಕುಲದ ಮೇಲಿನ ನಿಸ್ವಾರ್ಥ ಪ್ರೀತಿಯ ಪ್ರತೀಕವಾಗಿದೆ ಎಂದು ತಿಳಿಸಿದರು. ಬಳಿಕ ಹಬ್ಬದ ಯಶಸ್ಸಿಗೆ ನೆರವಾದ ಧಾನಿಗಳು ಹಾಗೂ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲಾಯಿತು. ವಾರ್ಷಿಕೋತ್ಸವದ ಸಂಭ್ರಮದಲ್ಲಿ ಡೆನಿಕಾ ಏಂಜೆಲ್ ಪಿಂಟೊ ಎಂಬ ಮಗುವಿಗೆ ಪರಮ ಪ್ರಸಾದ ಸಂಸ್ಕಾರ ನೀಡಲಾಗಿದ್ದು, ಪೂಜೆಯ ನಂತರ ಚಂದವಳ್ಳಿಯ ವಾದ್ಯ ಮೇಳದ ತಂಡದೊಂದಿಗೆ ಕೊಟ್ಟಿಗೆಹಾರ ಪೇಟೆಯಲ್ಲಿ ಭಕ್ತಾದಿಗಳು ಮೇಣದ ಬತ್ತಿ ಹಿಡಿದು ಭವ್ಯ ತೇರಿನ ಮೆರವಣಿಗೆ ನಡೆಸಿ ಸಂಭ್ರಮಿಸಿದರು. ಕಾರ್ಯಕ್ರಮದಲ್ಲಿ ವಲಯದ ಧರ್ಮಗುರು ಫಾ.ಪೌಲ್ ಡಿಸೋಜ ಸೇರಿದಂತೆ ವಿವಿಧ ಚರ್ಚ್ಗಳ ಧರ್ಮಗುರುಗಳಾದ ಫಾ.ಶಾಂತರಾಜ್, ಫಾ.ಲ್ಯಾನ್ಸಿ ಪಿಂಟೋ, ಫಾ.ಜಾನ್ ಪಾಲ್, ಫಾ.ಡೇವಿಡ್ ಪ್ರಕಾಶ್, ಫಾ.ರಾಜೇಂದ್ರ ಕುಮಾರ್, ಫಾ.ಫೆಲಿಕ್ಸ್ ರೊಸಾರಿಯೊ, ಫಾ.ಅಂಥೋಣಿ ರಾಜ್, ಫಾ.ಅರುಣ್ ಲೋಬೊ, ಫಾ.ಥಾಮಸ್ ಕಲಘಟಗಿ ಸೇರಿದಂತೆ 30ಕ್ಕೂ ಅಧಿಕ ಗುರುಗಳು ಹಾಗೂ ಜಾವಳಿ, ಬಾಳೂರು, ಕೊಟ್ಟಿಗೆಹಾರ ಭಾಗದ ಕ್ರೈಸ್ತ ಭಕ್ತಾಧಿಗಳು ಭಾಗವಹಿಸಿದ್ದರು.




