ಚಾಮರಾಜನಗರ: ಬೆಳವಡಿ ಮಲ್ಲಮ್ಮನಂತಹ ವೀರ ನಾರಿ, ಮಹಾರಾಣಿಯನ್ನು ಹೊಂದಿದ ಕನ್ನಡಿಗರು ಶ್ರೇಷ್ಠರು, ಇಡೀ ವಿಶ್ವದಲ್ಲೇ ಮೊಟ್ಟಮೊದಲು ಮಹಿಳಾ ಸೈನ್ಯವನ್ನು ಕಟ್ಟಿ ಬೆಳೆಸಿದ ಇತಿಹಾಸದ ಮೊದಲ ರಾಣಿ ಬೆಳವಡಿ ಮಲ್ಲಮ್ಮ. ಈಕೆ ಕನ್ನಡಿಗರು ಎಂಬುದು ಮತ್ತಷ್ಟು ಹೆಮ್ಮೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು. ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಳವಡಿ ಮಲ್ಲಮ್ಮ ಕೊಡುಗೆಗಳು ಕುರಿತು ಮಾತನಾಡುತ್ತಾ ಬೆಳವಡಿ ಮಲ್ಲಮ್ಮ ಕರ್ನಾಟಕದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೆಳವಾಡಿಯವರು. ಬೆಳವಡಿ ಮಲ್ಲಮ್ಮ ಬಾಲ್ಯದಿಂದಲೂ ಧೈರ್ಯಶಾಲಿ,ಬುದ್ದಿವಂತಳಾಗಿದ್ದು, ಕತ್ತಿವರಸೇ, ಬಿಲ್ಲುಗಾರಿಕೆ, ಕುದುರೆ ಸವಾರಿ, ಮುಂತಾದ ಯುದ್ಧ ಕೌಶಲ್ಯಗಳನ್ನು ಪರಿಣಿತಗೊಳಿಸಿಕೊಂಡು ಸಮಗ್ರವಾದ ಮಿಲಿಟರಿ ತರಬೇತಿಯನ್ನು ಪಡೆದು, ಶಿಸ್ತು ಬದ್ಧ ದಿನಚರಿಯನ್ನು ಹೊಂದಿದಂತಹ ಬೆಳವಾಡಿ ಮಲ್ಲಮ್ಮ ಒಟ್ಟು ಎರಡು ಸಾವಿರಕ್ಕೂ ಹೆಚ್ಚು ಮಹಿಳಾ ಸೈನಿಕರು, 3000ಕ್ಕೂ ಹೆಚ್ಚು ಅಂಗರಕ್ಷಕರನ್ನು ಹೊಂದಿದ್ದ ಒಟ್ಟು ಹತ್ತು ಸಾವಿರಕ್ಕೂ ಹೆಚ್ಚು ಬಲ ಸೈನ್ಯವನ್ನು ಹೊಂದಿದ್ದ ಈಕೆ ನಾಯಕತ್ವ ಗುಣದಲ್ಲಿ ಪ್ರಭಾವಶಾಲಿಯಾದವರು. ಶಿವಾಜಿ ಮತ್ತು ಮಲ್ಲಮ್ಮನ ಹೋರಾಟದ ಬಗ್ಗೆ ನೂರಾರು ಸಾಹಸ ಕಥೆಗಳು ಜನಪದ ಕಥೆಗಳು ಜನರಲ್ಲಿ ಇದೆ. ಶಿವಾಜಿ ಪಡೆಯ ಹಾಗೂ ಬೆಳವಡಿ ಮಲ್ಲಮ್ಮನ ಯುದ್ಧದಲ್ಲಿ ಮರಾಠ ಸೈನ್ಯವು ಅಪಾರಕ್ಕೆ ನಷ್ಟ ಉಂಟು ಮಾಡಿದ ಹೋರಾಟ ಮರೆಯಲಾಗದು. 27 ದಿನಗಳ ಕಾಲ ಶಿವಾಜಿಯವರ ಮರಾಠ ಸೈನ್ಯದ ವಿರುದ್ಧ ಹೋರಾಟ ನಡೆಸಿ ಅಪ್ರತಿಮ ಧೈರ್ಯ ಸಾಹಸವನ್ನು ಮೆರೆದವರು. ಬೆಳವಡಿ ಮಲ್ಲಮ್ಮ ವೀರರಾಣಿ ಅಲ್ಲದೆ ಶ್ರೇಷ್ಠ ಸಾಹಿತಿಯಾಗಿ ಕಲೆ ವಾಸ್ತು ಶಿಲ್ಪಕ್ಕೆ ಪ್ರೋತ್ಸಾಹ ನೀಡಿದವರು. ಜನಪದ, ಸಾಂಸ್ಕೃತಿಕ ಇತಿಹಾಸ ದಲ್ಲಿ ಬೆಳವಡಿ ಮಲ್ಲಮ್ಮ ಹೆಸರುವಾಸಿ. ಕನ್ನಡದ ಹೆಣ್ಣು ಮಕ್ಕಳು ಕನ್ನಡ ನಾಡು-ನುಡಿ ಜಲ ಭಾಷೆ ರಾಜ್ಯವನ್ನು ಸಂರಕ್ಷಣೆ ಮಾಡುವ ದಿಕ್ಕಿನಲ್ಲಿ ಹೋರಾಟವನ್ನು ನಡೆಸಿರುವುದು ಕನ್ನಡಿಗರಿಗೆ ಸದಾ ಗೌರವವನ್ನು ಹೆಚ್ಚಿಸುತ್ತದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕರಾದ ಶ್ರೀಮತಿ ಗೀತಾ ರವರು ಬೆಳವಡಿ ಮಲ್ಲಮ್ಮನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಬೆಳವಡಿ ಮಲ್ಲಮ್ಮನವರ ಬಗ್ಗೆ ಕಾರ್ಯಕ್ರಮ ರೂಪಿಸಿ ಜಾಗೃತಿ ಮೂಡಿಸುವ ನಮ್ಮ ಸಂಸ್ಕೃತಿಯ ಪರಂಪರೆಗೆ ಹೋರಾಟ ನಡೆಸಿದ ಮಹನೀಯರನ್ನು ನೆನೆಸಿಕೊಳ್ಳುವ ನಮ್ಮ ಧರ್ಮ ಎಂದರು. ಮಾಜಿನಗರ ಸಭೆಯ ಸದಸ್ಯರಾದ ಶ್ರೀಮತಿ ಪದ್ಮಾಪುರುಷೋತ್ತಮ್ ರವರು ಮರಾಠ ದೊರೆ ಶಿವಾಜಿಯ ಸೈನ್ಯವನ್ನು ಸೋಲಿಸಿ ಸಂಭ್ರಮಿಸಿದ ಬೆಳವಡಿ ಮಲ್ಲಮ್ಮ ಇತಿಹಾಸದಲ್ಲಿ ದಾಖಲೆ ಎಂದು ತಿಳಿಸಿದರು. ನಿವೃತ್ತ ಮುಖ್ಯ ಶಿಕ್ಷಕಿ ಸರಸ್ವತಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ರವಿಚಂದ್ರ ಪ್ರಸಾದ್,ಪ್ರಾಚಾರ್ಯ ಕಾಗಲವಾಡಿ ರಂಗಸ್ವಾಮಿ, ಸುರೇಶ್ ಗೌಡ, ರಾಮಸಮುದ್ರದ ಸುರೇಶ್, ಲಕ್ಷ್ಮಿಪುರದ ಸಿದ್ದರಾಜು, ಚಿತ್ರ ಕಲಾವಿದರಾದ ಮಹಮದ್ ಗೌಸ್ ಮುಂತಾದವರು ಉಪಸ್ಥಿತರಿದ್ದರು.
