
ಕಾರ್ಕಳ: ಮಹಿಳೆಯರ ರಕ್ಷಣೆ ಹಾಗೂ ಸಾಂತ್ವನಕ್ಕಾಗಿ ಕಾರ್ಯನಿರ್ವಹಿಸುವ ಸಾಂತ್ವನ ಕೇಂದ್ರದ ಆಡಳಿತ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಹಸ್ತಕ್ಷೇಪ ಇರಬಾರದು ಎಂದು ಸಾಮಾಜಿಕ ಕಾರ್ಯಕರ್ತೆ ರಮಿತಾ ಸೂರ್ಯವಂಶಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾರ್ಕಳ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಂತ್ವನ ಕೇಂದ್ರದಲ್ಲಿ ಕೌನ್ಸಿಲಿಂಗ್ ಸಿಬ್ಬಂದಿಯ ನೇಮಕಾತಿ ಹಾಗೂ ಕೇಂದ್ರದ ಆಡಳಿತದಲ್ಲಿ ಯಾವುದೇ ಸಂಘಟನೆ ಅಥವಾ ವ್ಯಕ್ತಿಯ ಪ್ರಭಾವ ಇರಬಾರದು ಎಂದು ಹೇಳಿದರು. ಸರ್ಕಾರದಿಂದ ನೇಮಕಗೊಂಡ ಅರ್ಹ ಸಿಬ್ಬಂದಿಯಿಂದಲೇ ಕೌನ್ಸಿಲಿಂಗ್ ಪ್ರಕ್ರಿಯೆ ನಡೆಸಬೇಕು. ಸಾಂತ್ವನ ಕೇಂದ್ರದ ಸಿಬ್ಬಂದಿ ಆಯ್ಕೆಯಲ್ಲಿಯೂ ಮಹಿಳಾ ಒಕ್ಕೂಟದ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಕಾರ್ಕಳ ಸಾಂತ್ವನ ಕೇಂದ್ರದಲ್ಲಿ ಮಹಿಳಾ ಒಕ್ಕೂಟದ ಅಧ್ಯಕ್ಷರೇ ಪ್ರಕರಣಗಳ ಕೌನ್ಸಿಲಿಂಗ್ನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ಆರೋಪವನ್ನು ರಮಿತಾ ಸೂರ್ಯವಂಶಿ ಮಾಡಿದರು. ಇಂತಹ ಪದ್ಧತಿಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಈ ಸಂಬಂಧ ಈಗಾಗಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಿಡಿಪಿಒ, ಉಪನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಮಿತಾ ಸೂರ್ಯವಂಶಿ ಆಗ್ರಹಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




