
ಬೆಂಗಳೂರು: ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಯ ಹಿತದೃಷ್ಟಿಯಿಂದಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶಾಲೆ ಹಾಗೂ ಕಾಲೇಜುಗಳ ಆವರಣಗಳಲ್ಲಿ ಜಂಕ್ ಫುಡ್ ಮಾರಾಟಕ್ಕೆ ಬ್ರೇಕ್ ಹಾಕಿದೆ. ವಿದ್ಯಾರ್ಥಿಗಳಿಗೆ ಆರೋಗ್ಯಕರ ಆಹಾರ ಒದಗಿಸಲು ಆರೋಗ್ಯ ಇಲಾಖೆ ಈ ಕಠಿಣ ಕ್ರಮವನ್ನು ಜಾರಿ ಮಾಡಿದ್ದು, ಇದನ್ನು ಅಧಿಕೃತವಾಗಿ ಆದೇಶಿಸಲಾಗಿದ್ದು, ಜೊತೆಗೆ ರಾಜ್ಯಾದ್ಯಂತ ವಿಶೇಷ ಪರಿಶೀಲನಾ ಅಭಿಯಾನ ಕೂಡ ಆರಂಭ ಮಾಡಲಾಗಿದೆ. ಜುಲೈ ತಿಂಗಳಿನಲ್ಲಿ ಅಧಿಕಾರಿಗಳು ಸುಮಾರು 134 ಶಾಲೆ-ಕಾಲೇಜುಗಳಲ್ಲಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶಾಲಾ ಆವರಣ ಹಾಗೂ ಸುತ್ತಮುತ್ತಲಿನ ಆಹಾರ ಮಳಿಗೆಗಳ ತಪಾಸಣೆ ಮಾಡಿದರು. ಆಹಾರದ ಗುಣಮಟ್ಟ, ಸ್ವಚ್ಛತೆ ಮತ್ತು ನೈರ್ಮಲ್ಯದ ಪರಿಶೀಲನೆ ನಡೆಸಿದ್ದು, ಅವಧಿ ಮೀರಿದ ಆಹಾರ ಪದಾರ್ಥಗಳ ಮಾರಾಟದ ಮೇಲೆ ನಿಗಾ ವಹಿಸಿ, ಜೊತೆಗೆ ಲೇಬಲಿಂಗ್ ಮತ್ತು ಪರವಾನಗಿ ದಾಖಲೆಗಳ ಪರಿಶೀಲನೆ ನಡೆಸಿ ಸಂಶಯಾಸ್ಪದ 53 ಆಹಾರ ಮಾದರಿಗಳ ಸಂಗ್ರಹ ಮಾಡಿದ್ದರು.




