
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಪಶ್ಚಿಮ ಘಟ್ಟಗಳ ತಪ್ಪಲು, ದತ್ತಪೀಠ ಮಾರ್ಗದ ಕವಿಕಲ್ ಗಂಡಿ ಬಳಿ ನಿರಂತರ ಮಳೆಯಿಂದಾಗಿ ಭೂಮಿಯ ತೇವಾಂಶ ಹೆಚ್ಚಾಗಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುತ್ತಿದ್ದ ಜಾಗದಲ್ಲೇ ಗುಡ್ಡ ಕುಸಿದಿದೆ. ಅತ್ತಿಗುಂಡಿ ಮತ್ತು ಮಹಲ್ ಸೇರಿದಂತೆ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಬಿದ್ದಿದ್ದ ಮಣ್ಣನ್ನು ಅಧಿಕಾರಿಗಳು ತೆರವುಗೊಳಿಸಿದ್ದು, ಪ್ರಸ್ತುತ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಮಳೆ ಮುಂದುವರಿದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಇರುವುದರಿಂದ ಸ್ಥಳೀಯರು ಮತ್ತು ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ವರದಿ: ಸಂತೋಷ್ ಅತ್ತಿಗೆರೆ




