
ಬೆಂಗಳೂರು: ನೀಟ್ ಪರೀಕ್ಷೆಯಲ್ಲಿ ಅರ್ಹತೆ ಪಡೆದು ವೈದ್ಯಕೀಯ, ದಂತವೈದ್ಯಕೀಯ ಹಾಗೂ ಆಯುಷ್ ಕೋರ್ಸ್ಗಳ ಪ್ರವೇಶಾತಿಗೆ ಕಾಯುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಪ್ರವೇಶ ಪ್ರಕ್ರಿಯೆಯಲ್ಲಿ ಭಾಗವಹಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಸಿಇಟಿ ಅರ್ಜಿಯೊಂದಿಗೆ ನೀಟ್ ರೋಲ್ ನಂಬರ್ ಅನ್ನು ನಮೂದಿಸಲು ವೆಬ್ಸೈಟ್ನಲ್ಲಿ ಲಿಂಕ್ ಲಭ್ಯಗೊಳಿಸಲಾಗಿದೆ. ಅರ್ಹ ಅಭ್ಯರ್ಥಿಗಳು ತಮ್ಮ ನೀಟ್ ರೋಲ್ ನಂಬರ್ ಅನ್ನು ಯಾವುದೇ ತಪ್ಪುಗಳಿಲ್ಲದೆ ಅತ್ಯಂತ ನಿಖರವಾಗಿ ನಮೂದಿಸಬೇಕಾಗಿದ್ದು, ರೋಲ್ ನಂಬರ್ ನಮೂದಿಸಿದ ನಂತರ ಅಭ್ಯರ್ಥಿಗಳು ನವೀಕರಿಸಿದ ಅರ್ಜಿ ಹಾಗೂ ಪರಿಶೀಲನಾ ಚೀಟಿಯನ್ನು ಕಡ್ಡಾಯವಾಗಿ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಆಗಸ್ಟ್ 3 ಕೊನೆಯ ದಿನಾಂಕವಾಗಿದ್ದು, ಲಿಂಕ್ ಚಾಲನೆಯಾದ ಮೊದಲ ದಿನವೇ 25,000ಕ್ಕೂ ಹೆಚ್ಚು ಅಭ್ಯರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಯಶಸ್ವಿಯಾಗಿ ನೋಂದಾಯಿಸಿದ್ದಾರೆ.



