
ಚಿಕ್ಕಮಗಳೂರು: ತಾಲೂಕಿನ ಹಳಿಯೂರು ಗ್ರಾಮದಲ್ಲಿ ನಿನ್ನೆ ಸಂಜೆಯ ಭಾರೀ ಗಾಳಿ-ಮಳೆ ಹಾಗೂ ಸಿಡಿಲಿನ ಅಬ್ಬರದ ನಡುವೆ ಅಪರೂಪದ ಘಟನೆ ನಡೆದಿದೆ. ಧರ್ಮೇಶ್ ಅವರಿಗೆ ಸೇರಿದ ಕಾಫಿ ತೋಟದಲ್ಲಿದ್ದ ಸುಮಾರು 100 ಅಡಿ ಎತ್ತರದ ಹಳೆಯ ಮರಕ್ಕೆ ಸಿಡಿಲು ಬಡಿದು ಸಂಪೂರ್ಣವಾಗಿ ಬೆಂಕಿ ಹೊತ್ತಿಕೊಂಡಿದೆ. ಮಳೆಯ ನಡುವೆಯೂ ಮರದುದ್ದಕ್ಕೂ ಬೆಂಕಿ ಉರಿಯುತ್ತಿದ್ದರೆ, ಗಾಳಿ ರಭಸಕ್ಕೆ ಮರದಿಂದ ಹೊರಬಿದ್ದ ಬೆಂಕಿಯ ಕಿಡಿಗಳು ಎಲ್ಲೆಡೆ ಹಾರುತ್ತಿರುವ ದೃಶ್ಯ ಕಂಡುಬಂದಿದೆ. ಆ ಕಿಡಿಗಳು ಮಿಂಚು ಹುಳುವಿನಂತೆ ಹೊಳೆಯುತ್ತಿದ್ದು, ಸ್ಥಳೀಯರು ಈ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಹತ್ತಾರು ವರ್ಷ ಹಳೆಯ ಈ ದೊಡ್ಡ ಮರ ಸಿಡಿಲಿನ ಅಘಾತಕ್ಕೆ ಹೊತ್ತಿ ಉರಿದಿದ್ದು ಪ್ರಕೃತಿಯ ಭೀಕರತೆಯ ಜೊತೆಗೆ ಅಚ್ಚರಿ ಹುಟ್ಟಿಸುವ ದೃಶ್ಯಕ್ಕೂ ಸಾಕ್ಷಿಯಾಗಿದೆ. ಸ್ಥಳದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂಬುದು ತಿಳಿದುಬಂದಿದೆ.




