
ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯಿಂದ ಪಟ್ಟಣದ ಅಡ್ಯಂತಾಯ ರಂಗಮಂದಿರದ ಅನುಭವ ಮಂಟಪ ವೇದಿಕೆಯಲ್ಲಿ 135ನೇ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಫ್ತಾಕ್ ಅವರು, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲಾ ಜಾತಿ, ಧರ್ಮದ ಜನರು ಗೌರವದಿಂದ ಬದುಕುವ ಹಕ್ಕು ನೀಡಿದ್ದು, ನ್ಯಾಯ ಎನ್ನುವುದು ಕೇವಲ ಕಾನೂನಿನ ಪದವಾಗಿರದೆ ನಮ್ಮ ನಡೆ-ನುಡಿಯಲ್ಲಿ ಅಳವಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯವೆಂದರು. ಪ್ರಗತಿಪರ ಲೇಖಕ ಹಾಗೂ ಹಿರಿಯ ಚಿಂತಕ ಶಿವಸುಂದರ್ ಮಾತನಾಡಿ, ಸಮಾಜದಲ್ಲಿ ಜಾತಿ, ಬಡವ-ಶ್ರೀಮಂತ ಬೇಧಭಾವ ಇನ್ನೂ ಅಂಟಿಕೊಂಡಿದ್ದು, ಅದನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ ಮತ್ತು ಬಂಧುತ್ವ ಎಂಬ ಮೌಲ್ಯಗಳನ್ನು ನೀಡಿದ್ದಾರೆ ಎಂದರು. ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ದೇಶವನ್ನು ಆಳುತ್ತಿರುವುದು ಸಂವಿಧಾನವೇ ಹೊರತು ಯಾವುದೇ ನಾಯಕನಲ್ಲ, ದೇಶದ ಏಕತೆ ಮತ್ತು ಸಂವಿಧಾನದ ಉಳಿವಿಗಾಗಿ ಎಲ್ಲರೂ ಒಂದಾಗಬೇಕೆಂದು ಕರೆ ನೀಡಿದರು. ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ಬಿ. ನಿಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಬಾರಿ ಎಲ್ಲಾ ಜಾತಿ-ಧರ್ಮದ ಜನರು ಒಟ್ಟಾಗಿ ಅಂಬೇಡ್ಕರ್ ಜಯಂತಿ ಆಚರಿಸಿದ್ದು ಜಾತ್ಯಾತೀತ ಪರಂಪರೆಯಾಗಿ ದೇಶಾದ್ಯಂತ ವಿಸ್ತರಿಸಲಿ ಎಂದು ಆಶಿಸಿದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರೀಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಮಿತಿ ಉಪಾಧ್ಯಕ್ಷರಾದ ಬಿ. ರುದ್ರಯ್ಯ, ಹಾಲಯ್ಯ, ಕೋಶಾಧಿಕಾರಿ ಸಿದ್ದೇಶ್ ಕೆಸವೊಳಲು, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಎಸ್. ಜಯರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ. ಸುರೇಂದ್ರ, ಕಾಫಿ ಬೆಳೆಗಾರ ಎಂ.ಪಿ. ಮನು, ಸಿಪಿಐ ಮುಖಂಡ ಬಿ.ಕೆ. ಲಕ್ಷ್ಮಣ್ ಕುಮಾರ್, ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜಾಕೀರ್ ಹುಸೇನ್, ಉದ್ಯಮಿ ಮಂಚೇಗೌಡ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.




