
ಕಾರ್ಕಳ:ಕಾರ್ಕಳ ತಾಲೂಕಿನ ಮಾಳ ಗೇಟಿನಿಂದ ಎಸ್.ಕೆ. ಬಾರ್ಡರ್ ಮೂಲಕ ಶೃಂಗೇರಿಯ ತನಿಕೋಡು ಗೇಟ್ವರೆಗಿನ 29 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಕುರಿತು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚರ್ಚಿಸಿದರು. ಈ ಹೆದ್ದಾರಿ ಅಭಿವೃದ್ಧಿಗೆ 550 ಕೋಟಿ ರೂ.ಗಳ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿದ್ದು, ಮಾಳ ಗೇಟ್ ಆರಂಭದಿಂದ ರಸ್ತೆಯ ಇಕ್ಕೆಲಗಳಲ್ಲಿ ಬರುವ ಅರಣ್ಯ ಪ್ರದೇಶ ತೆರವುಗೊಳಿಸಲು ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ 50 ಎಕರೆ ಭೂಮಿಯನ್ನು ವರ್ಗಾಯಿಸಬೇಕಾಗಿದೆ. ಈ ಸಂಬಂಧ ಕಡತ ವಿಲೇವಾರಿಗಾಗಿ ಶಿವಮೊಗ್ಗ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದರು. ಇಲಾಖೆಯ ಮಾಹಿತಿಯ ಪ್ರಕಾರ, ಹಿಂದೆ ಗುಲಗುಂಜಿ ಮನೆ, ಕೊರ್ಕನಹಳ್ಳಿ ಸೇರಿದಂತೆ ಮೂರು ಸೇತುವೆಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದರೂ ಅರಣ್ಯ ಇಲಾಖೆಯ ಅನುಮತಿ ಸಿಗದ ಕಾರಣ ಯೋಜನೆಗಳು ರದ್ದಾಗಿದ್ದವು. ಇದೀಗ ಅರಣ್ಯ ಇಲಾಖೆಯ ಅನುಮತಿಗಾಗಿ ನಿರೀಕ್ಷಿಸಲಾಗುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಗಡಿ ಗುರುತು ಮಾಡಲು ಸೂಚನೆ ನೀಡಲಾಗಿದೆ. ಕಂದಾಯ ಇಲಾಖೆ ಪ್ರಸ್ತಾಪಿತ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರೆ, 1999ರಿಂದ ಸುಮಾರು 25 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಾಳ-ತನಿಕೋಡು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಚಾಲನೆ ಸಿಗುವ ನಿರೀಕ್ಷೆಯಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಯೋಜನೆಯ ಪ್ರಗತಿ ಹಾಗೂ ಅಗತ್ಯ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಸ್ಥಳದಲ್ಲೇ ಸಮಾಲೋಚನೆ ನಡೆಸಿದ ಅವರು, ಕಾಮಗಾರಿಗೆ ಎದುರಾಗಿರುವ ಅಡೆತಡೆಗಳನ್ನು ನಿವಾರಿಸಿ ಶೀಘ್ರದಲ್ಲಿ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ನವೀನ್ ರಾಜ್, ಅರಣ್ಯ ಇಲಾಖೆಯ ಅರುಣ್, ಸತೀಶ್ ನಾಯಕ್, ಸುಬ್ರಹ್ಮಣ್ಯ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.




