
ಬೇಸಿಗೆಯ ಉರಿ ಸೆಕೆಯಲ್ಲಿ ಊಟಕ್ಕಿಂತ ದೇಹವನ್ನು ತಂಪಾಗಿಡುವ ಪಾನೀಯಗಳತ್ತ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಈ ಬಿಸಿಲಿನ ತೀವ್ರತೆಯಲ್ಲಿ ದೇಹವನ್ನು ಶೀತಲವಾಗಿಡಲು ವಿವಿಧ ಪಾನೀಯಗಳ ಅಗತ್ಯ ಹೆಚ್ಚಾಗಿದ್ದು, ಸದಾ ನೀರನ್ನೇ ಕುಡಿಯುವುದು ಎಲ್ಲರಿಗೂ ಸಾಧ್ಯವಿಲ್ಲ. ಆದ್ದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ಪೂರೈಸುವುದರ ಜೊತೆಗೆ ನೀರಡಿಕೆಯನ್ನು ನಿವಾರಿಸುವ ಆರೋಗ್ಯಕರ ಪಾನೀಯಗಳನ್ನು ಸೇವಿಸುವುದು ಅತ್ಯಂತ ಮುಖ್ಯವಾಗಿದೆ.
ನಿಮ್ಮ ಬಾಯಾರಿಕೆಯನ್ನು ತಣಿಸುವ ಕೆಲವು ಪಾನೀಯಗಳು ಇಲ್ಲಿವೆ. ನಿಮಗೆ ಯಾವುದು ಇಷ್ಟ?
ಪಾನಕಗಳು:
ನಿಂಬೆ, ಹುಣಸೆಹಣ್ಣು, ಬೇಲದ ಹಣ್ಣುಗಳಿಂದ ತಯಾರಿಸುವ ಪಾನಕಗಳು ಬೇಸಗೆಯಲ್ಲಿ ಅತ್ಯಂತ ಜನಪ್ರಿಯ. ಇವು ದೇಹಕ್ಕೆ ವಿಟಮಿನ್ಗಳನ್ನು ಪೂರೈಸಿ ಜೀರ್ಣಕ್ರಿಯೆ ಸುಧಾರಿಸಲು ಸಹಕಾರಿಯಾಗುತ್ತವೆ. ಬೆಲ್ಲ ಹಾಗೂ ಏಲಕ್ಕಿ ಸೇರಿಸಿದರೆ ದೇಹಕ್ಕೆ ತಂಪು ನೀಡುವ ಜೊತೆಗೆ ಶಕ್ತಿ ಹೆಚ್ಚಿಸುತ್ತದೆ.
ಇನ್ಫ್ಯೂಸ್ಡ್ ವಾಟರ್:
ಅನಾನಸು, ಸೌತೇಕಾಯಿ, ಪುದೀನಾ, ನಿಂಬೆಹುಲ್ಲು, ದ್ರಾಕ್ಷಿ ಮುಂತಾದವುಗಳನ್ನು ನೀರಿಗೆ ಬೆರೆಸಿ ತಯಾರಿಸುವ ಈ ಪಾನೀಯವು ದಿನವಿಡೀ ತಾಜಾತನ ನೀಡುತ್ತದೆ. ನೀರಿನ ರುಚಿಯನ್ನು ಹೆಚ್ಚಿಸುವುದರಿಂದ ಹೆಚ್ಚು ನೀರು ಕುಡಿಯಲು ಸಹಾಯ ಮಾಡುತ್ತದೆ ಹಾಗೂ ದೇಹದ ನೀರಿನ ಸಮತೋಲನ ಕಾಪಾಡುತ್ತದೆ.
ಎಳನೀರು:
ಎಳನೀರು ನೈಸರ್ಗಿಕ ಎಲೆಕ್ಟ್ರೋಲೈಟ್ಗಳಿಂದ ಸಮೃದ್ಧವಾಗಿದ್ದು, ಬೇಸಗೆಯಲ್ಲಿ ದೇಹಕ್ಕೆ ಅಮೃತ ಸಮಾನ. ಬಿಸಿಲಿನಲ್ಲಿ ಸುತ್ತಾಡಿದ ನಂತರ ಅಥವಾ ವ್ಯಾಯಾಮದ ಬಳಿಕ ಕುಡಿಯುವುದರಿಂದ ದೇಹದ ದಣಿವು ಕಡಿಮೆಯಾಗುತ್ತದೆ ಹಾಗೂ ತಕ್ಷಣ ಶಕ್ತಿ ಸಿಗುತ್ತದೆ.
ಎಳ್ಳಿನ ಪಾನಕ:
ನೆನೆಸಿದ ಎಳ್ಳನ್ನು ಏಲಕ್ಕಿಯೊಂದಿಗೆ ರುಬ್ಬಿ ಹಾಲು ಹಾಗೂ ಬೆಲ್ಲ ಸೇರಿಸಿ ತಯಾರಿಸುವ ಪಾನಕ ದೇಹವನ್ನು ತಂಪಾಗಿಸುತ್ತದೆ. ಇದು ದೇಹಕ್ಕೆ ಅಗತ್ಯ ಪೋಷಕಾಂಶಗಳನ್ನು ನೀಡುವ ಜೊತೆಗೆ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಸಹಾಯಕ.
ಹೆಸರುಕಾಳಿನ ಎಸರು:
ಹೆಸರುಕಾಳನ್ನು ನೆನೆಸಿ ರುಬ್ಬಿ ತಯಾರಿಸುವ ಈ ಪಾನೀಯವು ದೇಹಕ್ಕೆ ಶಕ್ತಿ ನೀಡುತ್ತದೆ. ತಂಪಾದ ಹಾಲು ಮತ್ತು ಬೆಲ್ಲ ಸೇರಿಸಿದರೆ ರುಚಿ ಹೆಚ್ಚಾಗಿ, ಬೇಸಗೆಯಲ್ಲಿ ದೇಹವನ್ನು ಶೀತಲವಾಗಿಡಲು ಸಹಕಾರಿ.
ರಾಗಿ ತಿಳಿ:
ರಾಗಿಯಿಂದ ತಯಾರಿಸುವ ತಿಳಿ ದಾಹ ನೀಗಿಸುವಲ್ಲಿ ಪರಿಣಾಮಕಾರಿ. ಇದು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ದೀರ್ಘಕಾಲ ಶಕ್ತಿಯನ್ನು ಉಳಿಸುತ್ತದೆ.
ಬೂದುಗುಂಬಳದ ರಸ:
ಬೂದುಗುಂಬಳವನ್ನು ರುಬ್ಬಿ ತೆಗೆದ ರಸ ದೇಹವನ್ನು ನೈಸರ್ಗಿಕವಾಗಿ ತಂಪಾಗಿಸುತ್ತದೆ. ಇದರಲ್ಲಿರುವ ಖನಿಜಗಳು ಮತ್ತು ವಿಟಮಿನ್ಗಳು ದೇಹದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತವೆ.
ಹಣ್ಣಿನ ರಸಗಳು:
ಕಲ್ಲಂಗಡಿ, ಅನಾನಸ್, ಕಿತ್ತಳೆ, ದ್ರಾಕ್ಷಿ ಮುಂತಾದ ಹಣ್ಣುಗಳಿಂದ ತಯಾರಿಸಿದ ರಸಗಳು ದೇಹಕ್ಕೆ ತಾಜಾತನ ನೀಡುತ್ತವೆ. ಕೃತಕ ಪಾನೀಯಗಳಿಗಿಂತ ಇವು ಆರೋಗ್ಯಕರವಾಗಿದ್ದು, ನೀರಡಿಕೆ ನಿವಾರಣೆಗೆ ಉತ್ತಮ.
ಮಜ್ಜಿಗೆ:
ಮಜ್ಜಿಗೆ ಜೀರ್ಣಕ್ರಿಯೆಗೆ ಸಹಕಾರಿ ಹಾಗೂ ದೇಹವನ್ನು ತಂಪಾಗಿಡುತ್ತದೆ. ಇಂಗು, ಜೀರಿಗೆ, ಕೊತ್ತಂಬರಿ, ಶುಂಠಿ ಸೇರಿಸಿದರೆ ರುಚಿಯೂ ಹೆಚ್ಚಾಗಿ ಆರೋಗ್ಯಕ್ಕೂ ಲಾಭ.
ಬೀಜಗಳು (ಚಿಯಾ, ಕಾಮಕಸ್ತೂರಿ):
ಈ ಬೀಜಗಳನ್ನು ನೀರಲ್ಲಿ ನೆನೆಸಿ ಸೇವಿಸುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ಸಿಗುತ್ತವೆ. ಬೇಸಗೆಯಲ್ಲಿ ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಮತ್ತು ಶಕ್ತಿ ನೀಡಲು ಇವು ಸಹಕಾರಿ.







