ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ತೇಜಸ್ವಿ ಪ್ರತಿಷ್ಠಾನದ ನೂತನ ಅಧ್ಯಕ್ಷ ಡಾ.ಪ್ರದೀಪ ಕೆಂಜಿಗೆ ಅವರು, 2007ರಲ್ಲಿ ವಿಸ್ಮಯ ಪ್ರತಿಷ್ಠಾನವಾಗಿ ಆರಂಭಗೊಂಡ ಸಂಸ್ಥೆ ನಂತರ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಜೀವವೈವಿದ್ಯ ಸಂಶೋಧನಾ ಕೇಂದ್ರವಾಗಿ ಪ್ರಸ್ತುತ ತೇಜಸ್ವಿ ಪ್ರತಿಷ್ಠಾನವಾಗಿ ಸಕ್ರಿಯ ಕಾರ್ಯಗಳಲ್ಲಿ ತೊಡಗಿಕೊಂಡಿದೆ ಎಂದು ತಿಳಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸಿ. ರಮೇಶ್ ಪ್ರತಿಷ್ಠಾನವು ತನ್ನ ದ್ಯೇಯ ಗುರಿಗಳಿಗೆ ಅನುಗುಣವಾಗಿ ಜ್ಞಾನಾಸಕ್ತರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು ಶ್ಲಾಘಿಸಿದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿ, ಪ್ರತಿಷ್ಠಾನದ ಚಟುವಟಿಕೆಗಳಿಗೆ ಜಿಲ್ಲಾಡಳಿತದಿಂದ ಸದಾ ಬೆಂಬಲ ದೊರೆಯುತ್ತದೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಡಾ. ಪ್ರದೀಪ ಕೆಂಜಿಗೆ, ರಾಘವೇಂದ್ರ, ರವೀಶ್ ಕ್ಯಾತನಬೀಡು, ರುದ್ರಸ್ವಾಮಿ ಸೇರಿದಂತೆ ಹೊಸ ಸದಸ್ಯರನ್ನು ಅಭಿನಂದಿಸಲಾಯಿತು. ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಇಲಾಖೆಯ ಸಿಬ್ಬಂದಿ ಹಾಗೂ ಪ್ರತಿಷ್ಠಾನದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
