
ಚಿಕ್ಕಮಗಳೂರು: ಕಾಫಿನಾಡಿನ ಕಾಡುಗಳಲ್ಲಿ ಕಾಡುಕೋಣಗಳ ಅಕ್ರಮ ಬೇಟೆ ನಡೆಯುತ್ತಿದ್ದು, ಬೇಟೆಯಾಡಿದ ಕಾಡುಕೋಣದ ಮಾಂಸವನ್ನು ಕೇರಳಕ್ಕೆ ಸಾಗಿಸುವ ಜಾಲ ಸಕ್ರಿಯವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಈ ಆರೋಪ ಮಾಡಿದ್ದು, ಕೇರಳದಲ್ಲಿ ಕಾಡುಕೋಣದ ಮಾಂಸಕ್ಕೆ ಕೆ.ಜಿ.ಗೆ ಸುಮಾರು 5 ಸಾವಿರ ರೂಪಾಯಿ ಬೆಲೆ ಇರುವ ಹಿನ್ನೆಲೆಯಲ್ಲಿ ಹೊರರಾಜ್ಯದ ಶಿಕಾರಿ ಗ್ಯಾಂಗ್ಗಳು ಚಿಕ್ಕಮಗಳೂರು ಕಾಡುಗಳಲ್ಲೇ ಬೀಡುಬಿಟ್ಟು ನಿರಂತರವಾಗಿ ಬೇಟೆಯಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಕ್ರಮ ಬೇಟೆ ಜಾಲಕ್ಕೆ ಅರಣ್ಯ ಇಲಾಖೆಯ ಕೆಳಹಂತದ ಕೆಲವು ಸಿಬ್ಬಂದಿ ಶಾಮೀಲಾಗಿರುವ ಶಂಕೆಯನ್ನೂ ವ್ಯಕ್ತಪಡಿಸಿದ್ದು, ಲಕ್ಷಾಂತರ ರೂಪಾಯಿ ಹಣ ಪಡೆದು ಅಕ್ರಮಕ್ಕೆ ಅಧಿಕಾರಿಗಳು ಸಹಕರಿಸುತ್ತಿರುವ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾಡುಕೋಣಗಳ ಅಕ್ರಮ ಬೇಟೆ ಜಾಲವನ್ನು ಬೇರುಸಹಿತ ಕಿತ್ತೊಗೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭೋಜೇಗೌಡ ಒತ್ತಾಯಿಸಿದ್ದಾರೆ.




