
ಚಾಮರಾಜನಗರ: ಭಗತ್ ಸಿಂಗ್ ಅವರ ತ್ಯಾಗ, ಬಲಿದಾನ, ಸ್ಥೈರ್ಯ ಮತ್ತು ಸಾಹಸವನ್ನು ಯುವಕರು ಆದರ್ಶವಾಗಿ ಅಳವಡಿಸಿಕೊಂಡಾಗ ಮಾತ್ರ ರಾಷ್ಟ್ರ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್. ಋಗ್ವೇದಿ ಅಭಿಪ್ರಾಯಪಟ್ಟರು. ಜೈ ಹಿಂದ್ ಪ್ರತಿಷ್ಠಾನ, ಅಮಚವಾಡಿ ಯುವಕರ ಸಂಘ ಹಾಗೂ ಅಮಚವಾಡಿ ರೆಡ್ ಬುಲ್ಸ್ ಕಬಡ್ಡಿ ತಂಡದ ವತಿಯಿಂದ ಕಬ್ಬಡಿ ಮೈದಾನದಲ್ಲಿ ಆಯೋಜಿಸಿದ್ದ ಕ್ರಾಂತಿಕಾರಿ ಭಗತ್ ಸಿಂಗ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಲ್ಯದಲ್ಲಿಯೇ ಬ್ರಿಟಿಷರ ದೌರ್ಜನ್ಯವನ್ನು ಕಣ್ಣಾರೆ ಕಂಡ ಭಗತ್ ಸಿಂಗ್, ಜಲಿಯನ್ ವಾಲಾಬಾಗ್ ದುರಂತದಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಹೋರಾಟದತ್ತ ಹೆಜ್ಜೆ ಇಟ್ಟರು. ವಿದ್ಯಾರ್ಥಿ ಜೀವನದಲ್ಲಿಯೇ ಕ್ರಾಂತಿಕಾರಿ ಸಂಘಟನೆಗಳೊಂದಿಗೆ ಗುರುತಿಸಿಕೊಂಡು, ತಮ್ಮ ಬರಹಗಳ ಮೂಲಕ ಯುವಜನರಲ್ಲಿ ದೇಶಭಕ್ತಿಯ ಕಿಚ್ಚು ಹಚ್ಚಿದರು. ಲಾಲಾ ಲಜಪತ್ ರಾಯ್ ಅವರ ಮೇಲಿನ ಬ್ರಿಟಿಷರ ದೌರ್ಜನ್ಯದಿಂದ ನೊಂದ ಭಗತ್ ಸಿಂಗ್, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಬಳಿಕ ಬಂಧನಕ್ಕೊಳಗಾಗಿ ಜೈಲಿನಲ್ಲಿಯೂ ರಾಜಕೀಯ ಕೈದಿಗಳ ಹಕ್ಕುಗಳಿಗಾಗಿ ಉಪವಾಸ ಸತ್ಯಾಗ್ರಹ ನಡೆಸಿ ಹೋರಾಟಗಾರರಿಗೆ ಸ್ಫೂರ್ತಿಯಾದರು ಎಂದು ಸ್ಮರಿಸಿದರು. ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಬಲಿದಾನ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚೈತನ್ಯ ನೀಡಿತು. ಇಂತಹ ದೇಶಭಕ್ತರ ಜೀವನ ಮತ್ತು ಹೋರಾಟಗಳು ಇಂದಿನ ಯುವಕರಿಗೆ ಮಾದರಿಯಾಗಬೇಕು. ಯುವಕರು ಶಿಕ್ಷಣ, ಸಂಘಟನೆ, ಸಮಾಜ ಸೇವೆ ಹಾಗೂ ದೇಶಪ್ರೇಮದ ಜೊತೆಗೆ ಕ್ರೀಡೆಯಲ್ಲಿಯೂ ಸಾಧನೆ ಮಾಡಬೇಕು. ವ್ಯಸನಗಳಿಂದ ದೂರವಿದ್ದು ಕ್ರೀಡಾಮನೋಭಾವ, ಸಾಂಸ್ಕೃತಿಕ ಚಿಂತನೆ ಮತ್ತು ದೇಶದ ಬಗ್ಗೆ ಗೌರವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಭಗತ್ ಸಿಂಗ್ ಜನ್ಮದಿನದ ಅಂಗವಾಗಿ ಕಬಡ್ಡಿಯಲ್ಲಿ ಸಾಧನೆ ಮಾಡಿರುವ ಅಮಚವಾಡಿ ರೆಡ್ ಬುಲ್ಸ್ ತಂಡದ ನಾಯಕ ಪ್ರಸಾದ್ ಅವರನ್ನು ಸುರೇಶ್ ಎನ್. ಋಗ್ವೇದಿ ಅವರು ಗೌರವಿಸಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಯುವ ಸಂಘ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ದೊಡ್ಡಮೋಳೆ ಮಾತನಾಡಿ, ಭಗತ್ ಸಿಂಗ್ ಅವರಂತಹ ದೇಶಭಕ್ತರ ಜನ್ಮದಿನದ ಅಂಗವಾಗಿ ಕ್ರೀಡಾ ಸಾಧಕರನ್ನು ಗೌರವಿಸುತ್ತಿರುವುದು ಹೆಮ್ಮೆಯ ವಿಚಾರ. ದೇಶಕ್ಕಾಗಿ ದುಡಿದ ಸ್ವಾತಂತ್ರ್ಯ ಹೋರಾಟಗಾರರ ಚಿಂತನೆಗಳು ಹಾಗೂ ಸಾಧನೆಗಳನ್ನು ಯುವಜನತೆಗೆ ಪರಿಚಯಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದರು. ಕಾರ್ಯಕ್ರಮದಲ್ಲಿ ಅಮಚವಾಡಿ ಕಬಡ್ಡಿ ತಂಡದ ಕುಮಾರ್, ಸಂಜು, ಮಹೇಂದ್ರ, ಪ್ರಸಾದ್, ಗಜೇಂದ್ರ, ಮನು, ಕೆಂಪರಾಜು ಸೇರಿದಂತೆ ಯುವ ಸಂಘಟನೆಯ ಶಿವರಾಂ, ಬಸವಣ್ಣ, ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.




