ಕೊಟ್ಟಿಗೆಹಾರ: ಪ್ಲಾಸ್ಟಿಕ್ ಮೆಸ್ನಲ್ಲಿ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬೃಹತ್ ನಾಗರಹಾವನ್ನು ಉರಗ ತಜ್ಞ ಆರೀಫ್ ಯಶಸ್ವಿಯಾಗಿ ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟ ಘಟನೆ ಮೂಡಿಗೆರೆ ತಾಲೂಕಿನ ಅರೆಕೊಡಿಗೆ ಗ್ರಾಮದಲ್ಲಿ ನಡೆದಿದೆ. ಅರೆಕೊಡಿಗೆ ಗ್ರಾಮದ ನಿತಿನ್ ಎಂಬುವವರ ಕಾಫಿ ನರ್ಸರಿಯಲ್ಲಿ ಅಳವಡಿಸಲಾಗಿದ್ದ ಪ್ಲಾಸ್ಟಿಕ್ ಮೆಸ್ನಲ್ಲಿ ನಾಗರಹಾವು ಆಕಸ್ಮಿಕವಾಗಿ ಸಿಲುಕಿಕೊಂಡಿತ್ತು. ಹೊರಬರಲಾಗದೆ ತೀವ್ರವಾಗಿ ಒದ್ದಾಡುತ್ತಿದ್ದ ಹಾವನ್ನು ಗಮನಿಸಿದ ಸ್ಥಳೀಯರು ಕೂಡಲೇ ಉರಗ ತಜ್ಞ ಆರೀಫ್ ಅವರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ಆರೀಫ್ ಸ್ಥಳಕ್ಕೆ ಧಾವಿಸಿ, ಅತ್ಯಂತ ಜಾಗರೂಕತೆಯಿಂದ ಮೆಸ್ನ್ನು ಕತ್ತರಿಸಿ ನಾಗರಹಾವನ್ನು ಯಾವುದೇ ಗಾಯವಾಗದಂತೆ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಬಳಿಕ ಪ್ರಾಣಾಪಾಯದಿಂದ ಪಾರಾದ ನಾಗರಹಾವನ್ನು ಚಾರ್ಮಾಡಿ ಘಾಟ್ನ ದಟ್ಟ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ರಕ್ಷಣಾ ಕಾರ್ಯಾಚರಣೆ ವೇಳೆ ಸ್ಥಳೀಯರಾದ ಸಚಿನ್, ಸಾಗರ್, ಪ್ರಶಾಂತ್ ಹಾಗೂ ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನಾಗರಹಾವಿನ ಜೀವ ಉಳಿಸಲು ಸಮಯಕ್ಕೆ ಸರಿಯಾಗಿ ಸ್ಪಂದಿಸಿದ ಉರಗ ತಜ್ಞ ಆರೀಫ್ ಅವರ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
