
ಚಿಕ್ಕಮಗಳೂರು: ಶೌಚಾಲಯಕ್ಕಾಗಿ ಅರ್ಜಿ ಕೊಟ್ಟು ಅಲೆದು ಅಲೆದು ಸಾಕಾಗಿದೆ ಎಂದು ಮಹಿಳೆಯೊಬ್ಬರು ತುಂಬಿದ ಸಭೆಯಲ್ಲಿ ಕಣ್ಣೀರಿಟ್ಟ ಘಟನೆ ಶೃಂಗೇರಿ ತಾಲೂಕಿನಲ್ಲಿ ನಡೆದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ನಡೆದಿದೆ. ಶಾಸಕ ಟಿ.ಡಿ. ರಾಜೇಗೌಡರ ಎದುರು ಮಹಿಳೆ ತನ್ನ ಅಳಲು ತೋಡಿಕೊಂಡಿದ್ದು, 8 ವರ್ಷದ ಮಗುವನ್ನು ಇಟ್ಟುಕೊಂಡು ಪರದಾಡುತ್ತಿದ್ದೇನೆ, ನನಗೊಂದು ಶೌಚಾಲಯ ಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಶೌಚಾಲಯಕ್ಕಾಗಿ ಅಧಿಕಾರಿಗಳಿಗೆ ಹಲವು ಬಾರಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಈ ವೇಳೆ ಶೌಚಾಲಯದ ವಿಚಾರದಲ್ಲೂ ಅಧಿಕಾರಿಗಳು ಜಾತಿ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದು, “ನೀವು ಎಸ್ಸಿ-ಎಸ್ಟಿಗೆ ಬರ್ತೀರಾ? ಬಂದ್ರೆ ಏನಾದರೂ ಮಾಡಬಹುದು” ಎಂದು ಅಧಿಕಾರಿಗಳು ಹೇಳಿದ್ದಾಗಿ ಮಹಿಳೆ ತಿಳಿಸಿದ್ದಾರೆ. ಇದಕ್ಕೆ “ಇಲ್ಲ ಸರ್, ನಾನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಹಿಳೆ” ಎಂದು ಕಣ್ಣೀರಿಟ್ಟಿದ್ದು, ಶೌಚಾಲಯದಂತಹ ಮೂಲಭೂತ ಸೌಲಭ್ಯ ಪಡೆಯಲೂ ಜಾತಿ ಆಧಾರಿತ ಮಾತು ಕೇಳಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಮಹಿಳೆ ನೋವು ತೋಡಿಕೊಂಡಿದ್ದಾರೆ.




