
ಚಿಕ್ಕಮಗಳೂರು: ಕಾಫಿನಾಡಲ್ಲಿ ಬೆಳ್ಳಂಬೆಳಗ್ಗೆ ವರುಣನ ಆರ್ಭಟ ಜೋರಾಗಿದ್ದು, ಮಲೆನಾಡು ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಸುಮಾರು ಎರಡು ತಿಂಗಳ ಬಳಿಕ ಮಲೆನಾಡು ಭಾಗದಲ್ಲಿ ಭರ್ಜರಿ ಮಳೆ ಕಂಡುಬಂದಿದ್ದು, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆ, ಕಳಸ, ಕೊಪ್ಪ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಬೆಳಗ್ಗೆಯಿಂದ ಮಳೆ ಮುಂದುವರಿದಿದ್ದು, ನಿರಂತರ ಮಳೆಯಿಂದ ಕಾಲುವೆ ಹಾಗೂ ರಸ್ತೆಗಳಲ್ಲೂ ನೀರು ಹರಿಯುತ್ತಿದೆ. ಮುಂಗಾರು ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಾಫಿ, ಮೆಣಸು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳ ಬೆಳೆಗಾರರು ಮಳೆಗಾಗಿ ಆಕಾಶ ನೋಡುತ್ತಿದ್ದರು. ಇದೀಗ ಉತ್ತಮ ಮಳೆ ಸುರಿದಿರುವುದು ಮಲೆನಾಡಿನ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ. ಇತ್ತ ಬಯಲುಸೀಮೆಯ ಕಡೂರು, ತರೀಕೆರೆ ಹಾಗೂ ಅಜ್ಜಂಪುರ ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿದಿದೆ. ಒಟ್ಟಿನಲ್ಲಿ ಹಲವು ದಿನಗಳ ಬಳಿಕ ಕಾಫಿನಾಡಲ್ಲಿ ವರುಣನ ಆಗಮನದಿಂದ ಮಲೆನಾಡಿಗರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.




