
ಚಿಕ್ಕಮಗಳೂರು: ರಸ್ತೆ ಗುಂಡಿಗಳಿಂದ ವಾಹನ ಸವಾರರು ಪರದಾಡುತ್ತಿದ್ದರೂ ಸಂಬಂಧಪಟ್ಟವರು ಗಮನಹರಿಸದ ಹಿನ್ನೆಲೆಯಲ್ಲಿ, ಸಣ್ಣ ಮಕ್ಕಳೇ ರಸ್ತೆ ದುರಸ್ತಿಗೆ ಮುಂದಾದ ಘಟನೆ ಕಳಸ ತಾಲೂಕಿನ ಹಳುವಳ್ಳಿ ಗ್ರಾಮದಲ್ಲಿ ನಡೆದಿದೆ. ಕಳಸ–ಬಾಳೆಹೊನ್ನೂರು ರಸ್ತೆಯಲ್ಲಿ ಬೃಹತ್ ಗುಂಡಿಗಳು ಬಿದ್ದಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿತ್ತು. ಶನಿವಾರ ಶಾಲೆಗೆ ರಜೆ ಇದ್ದ ಕಾರಣ ಮೂವರು ಯುವಕರು ಗುದ್ದಲಿ, ಬಾಂಡ್ಲಿ ಹಿಡಿದು ರಸ್ತೆ ಬದಿಯ ಮಣ್ಣನ್ನು ತಂದು ಗುಂಡಿಗಳಿಗೆ ತುಂಬಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ. ವಾಹನ ಸವಾರರು ಗುಂಡಿಗಳಲ್ಲಿ ಸಿಲುಕಿ ಪರದಾಡುವುದನ್ನು ಕಂಡ ಮಕ್ಕಳೇ ರಸ್ತೆ ಗುಂಡಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿರುವುದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮೂಡಿಸಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಗುಂಡಿಗಳನ್ನು ಶಾಶ್ವತವಾಗಿ ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.




