
ನಮ್ಮ ಸಮಾಜದಲ್ಲಿ ಏನಾಗುತ್ತಿದೆ? ಮನುಷ್ಯರಲ್ಲಿ ಇರಬೇಕಾದ ಮನುಷ್ಯತ್ವ, ವಿವೇಕ, ವಿವೇಚನೆ ಎಲ್ಲಾ ಏನಾಗಿ ಹೋಗಿದೆ? ನೀವು ಇವತ್ತು ಯಾವುದೇ ಸುದ್ಧಿ ವಾಹಿನಿಯನ್ನು ನೋಡಿ ದಿನಕ್ಕೊಂದು ರಕ್ತಪಾತ, ಅತ್ಯಾಚಾರದ ಸುದ್ಧಿಗಳನ್ನು ರಸವತ್ತಾಗಿ ಚಪ್ಪರಿಸಿ ಹೇಳುತ್ತಿರುತ್ತಾರೆ. ಯಾರದೋ ಮಚ್ಚಿನೇಟಿಗೆ ಕತ್ತು ಒಡ್ಡಿ ಸತ್ತವನು ಇನ್ನೂ ಬದುಕಿನಲ್ಲಿ ಅರ್ಧವನ್ನೂ ನೋಡಿರುವುದಿಲ್ಲ. ಕೊಂದು ಜೈಲು ಸೇರಿದವನಿಗಾದರೂ ಅಷ್ಟೆ. ಇನ್ನು ದಿನ ಬೆಳಗಾದರೆ ಕೇಳುವ ಆತ್ಮಹತ್ಯೆ ಸುದ್ಧಿಗಳು, ಬಾವಿಗೆ ಹಾರಿ, ವಿಷ ಸೇವಿಸಿ, ನೇಣು ಬಿಗಿದುಕೊಂಡು, ಬೆಂಕಿ ಹಚ್ಚಿಕೊಂಡು ಅಬ್ಬಬ್ಬಾ…. ಎಂತಹ ಧಾರುಣ ಸಾವನ್ನು ತಂದುಕೊಳ್ಳುತ್ತಾರಲ್ಲ….. ಅವರಿಗಾದರೂ ಏನ್ ಮಹಾ ವಯಸ್ಸಾಗಿರುತ್ತೆ ಅಂತೀರಾ… ಇಪ್ಪತ್ತು-ಮೂವತ್ತರ ಆಸುಪಾಸಿನವರೇ! ಹರೆಯದ ಬದುಕು ಹೀಗೆ ದುರಂತ ಅಂತ್ಯ ಕಾಣುತ್ತಿರುವುದಾದರೂ ಯಾಕಿರಬಹುದು? ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಂಕಲ್ಪ ಮಾಡುವುದಾದರೂ ಯಾಕೆ? ನೀವು ಗಮನಿಸಿ ನೋಡಿ, ತೀರಾ ಎಳೆಯ ಪ್ರಾಯದಲ್ಲಿ ಬದುಕನ್ನು ಅಂತ್ಯ ಗೊಳಿಸಿಕೊಂಡವರ ಕಾರಣಗಳಾದರೂ ಏನಿರುತ್ತವೆ? ಅಪ್ಪ ಅಮ್ಮ ಬೈದರು, ಫೇಲಾದ, ಹೊಟ್ಟೆನೋವು, ಪ್ರೀತಿಯಲ್ಲಿ ಮೋಸ ಹೋದೆ, ಗಂಡನಿಗೆ ಅನುಮಾನ ಹೀಗೆ ಸಿಲ್ಲಿ ಕಾರಣಗಳನ್ನಿಟ್ಟುಕೊಂಡು ತಮ್ಮ ಅಮೂಲ್ಯ ಬದುಕನ್ನು ಕೊನೆಗಾಣಿಸಿಕೊಂಡು ಬಿಡುತ್ತಾರೆ. ಸತ್ತವಳ ಬಗ್ಗೆ ಇಡೀ ಊರಿನಲ್ಲಿ ಹತ್ತಾರು ಅಂತೆಕಂತೆಗಳ ಕತೆಗಳು ಹುಟ್ಟಿಕೊಳ್ಳುತ್ತವೆ. ತನ್ನ ಮಗಳ ಬಗ್ಗೆ ಕನಸು ಕಾಣುತ್ತಾ ಮಳೆ ಬಿಸಿಲು ಲೆಕ್ಕಿಸದೇ ದುಡಿಯಿತ್ತಿದ್ದ ಅಪ್ಪನ ಆಶಾಗೋಪುರವನ್ನು ನೇಣಿಗೆ ಬಿದ್ದ ಮಗಳು ನುಚ್ಚು ನೂರು ಮಾಡಿಬಿಡುತ್ತಾಳೆ. ಪ್ರೀತಿಸಿ ಕೈ ಕೊಟ್ಟ ಹುಡುಗನ ಬಗ್ಗೆ ಇರುವ ಆಕೆಯ ಮೋಹದ ಮುಂದೆ ಅಪ್ಪನ ಬೆವರ ಹನಿಗಳು ಅವಳಿಗೆ ಕಾಣಿಸುವುದೇ ಇಲ್ಲ. ತೀರಾ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸಾವೇ ಪರಿಹಾರ ಎಂಬ ನಿರ್ಧಾರಕ್ಕೆ ಬರುವ ಇಂದಿನ ಯುವ ಸಮೂಹಕ್ಕೆ ಆತ್ಮಸ್ಥೈರ್ಯ, ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕು. ಆದರೆ ಆ ವ್ಯವಧಾನ ಯಾರಿಗಿದೆ ಹೇಳಿ? ಪ್ರತಿಯೊಬ್ಬರದು ಸ್ವಾರ್ಥ ಚಿಂತನೆ, ಅವರವರದೇ ಲೋಕದಲ್ಲಿ ಅವರೇ ವಿಹರಿಸುತ್ತಿರುತ್ತಾರೆ. ಯಾರ ಬಗ್ಗೆ ಯಾಕಾದರೂ ಯೋಚಿಸುತ್ತಾರೆ. ದುರಂತ ಎಂದರೆ ನಾವು ನಮ್ಮವರ ಬಗ್ಗೆಯೇ ಯೋಚಿಸುವುದನ್ನು ಬಿಟ್ಟಿದ್ದೇವೆ. ನಮ್ಮ ಬಂಧು-ಬಳಗ, ನಮ್ಮದೇ ಅಕ್ಕ, ತಮ್ಮ, ತಂಗಿ, ಮಡದಿ ಯಾವುದೋ ಸಮಸ್ಯೆಗೆ ಸಿಲುಕಿ ಒದ್ದಾಡುತ್ತಿದ್ದರೂ ನಾವೇ ಗಮನಿಸದ ಮಟ್ಟಕ್ಕೆ ನಾವು ಬ್ಯುಸಿ! ಮಾಧ್ಯಮಗಳಾದರೂ ಅಷ್ಟೆ. ಒಂದು ಕೊಲೆಯಾದಾಗ ಸಂಘಟನೆ, ರಾಜಕೀಯ ಮುಖಂಡರನ್ನು ಮುಂದಿಟ್ಟುಕೊಂಡು ಕೊಲೆಯಾದವನ, ಕೊಲೆಗಾರರ ಕುರಿತು ಚರ್ಚಿಸುತ್ತವೆ. ಆದರೆ ಒಬ್ಬ ಮಾನಸಿಕ ತಜ್ಞರನ್ನು ಆಪ್ತ ಸಮಾಲೋಚಕರನ್ನು ಕೂರಿಸಿಕೊಂಡು ಮನುಷ್ಯ ಯಾಕೆ ಮೃಗವಾಗುತ್ತಿದ್ದಾನೆ ಎಂಬ ಚರ್ಚೆ ಮಾಡುವುದಿಲ್ಲ. ನೂರಾರು ಮಂದಿ ಯನ್ನು ಕರೆದು ಫೋಟೋ ತೆಗೆಸಿಕೊಂಡು, ಅಕ್ಷತೆ ಹಾಕಿಸಿಕೊಂಡ ನವ ವಧು ಗಂಡನ ಹಿಂಸೆ ತಾಳಲಾರದೆ ಬೆಂಕಿ ಹಚ್ಚಿಕೊಳ್ಳುತ್ತಾಳೆ! ಅವತ್ತು ಉಂಡು, ಫೋಟೋಕ್ಕೆ ಫೋಸು ನೀಡಿದವರಲ್ಲಿ ಒಬ್ಬರಾದರೂ ಅವಳಿಗೆ ಆಸರೆ ಆಗುವುದಿಲ್ಲ, ಸಂತೈಸುವುದಿಲ್ಲ, ಧೈರ್ಯ ಹೇಳುವುದಿಲ್ಲ! ಎಂತಹ ಘೋರ ಅಲ್ವಾ? ನಂಗೊತ್ತು ಈ ಸಮಾಜವನ್ನು ಎದುರಿಸುವುದು ನಾನು ಇಲ್ಲಿ ಬರೆದಷ್ಟು ಸುಲಭವಲ್ಲ. ನಮಗಾದ ತೊಂದರೆಗಿಂತ, ನಮ್ಮ ಜನಗಳ ಟೀಕೆ, ಅಪಹಾಸ್ಯಗಳೇ ನಮ್ಮನ್ನು ಈ ಜಗತ್ತಿನಿಂದ ದೂರ ಹೋಗುವಂತೆ ಮಾಡುತ್ತದೆ. ಓದುಗರೇ, ನಾನು ಪದೇ ಪದೇ ಹೇಳುವುದಿಷ್ಟೆ. ಮನುಷ್ಯ ಮನುಷ್ಯರ ನಡುವೆ ಬಂಧಗಳು ಬೆಸೆಯಬೇಕು. ನೊಂದ ನಿಮ್ಮ ಗೆಳೆಯನಿಗೆ ನೀವು ಆಸ್ತಿ, ಹಣ ಯಾವುದು ಕೊಡಬೇಡಿ. ಸುಮ್ಮನೆ ಆತನ ಹೆಗಲ ಮೇಲೆ ಆತ್ಮೀಯವಾಗಿ ಕೈಯಿರಿಸಿ ಸಾಕು. ಅದು ಆಗಲ್ವಾ? ಯಾರದೋ ಬಗ್ಗೆ ಅವನು ವಿಪರೀತ ಸಾಲ ಮಾಡಿಕೊಂಡಿದಾನಂತೆ, ಅವಳು ಸರಿ ಇಲ್ವ್ವಂತೆ ಇಂತಹ ಮಾತುಗಳನ್ನ ಆಡ್ತೀರಲ್ವಾ ಅದನ್ನಾದ್ರು ನಿಲ್ಲಿಸಿಬಿಡಿ. ಅಷ್ಟು ಸಾಕು…






