ಬೆಂಗಳೂರು: ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಸನ್ಮಾನ್ಯ ಶ್ರೀ ಜಿ.ಎಸ್. ಪಾಟೀಲ್ ಅವರಿಗೆ ಸದನದಲ್ಲಿ ಅಭಿನಂದನೆ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, ನೂತನ ಸಭಾಧ್ಯಕ್ಷರಿಂದ ಹಲವು ನಿರೀಕ್ಷೆಗಳಿವೆ ಎಂದು ಹೇಳಿದರು. ಸಭಾಧ್ಯಕ್ಷರ ಪೀಠ ಪಕ್ಷಕ್ಕಿಂತ ಎತ್ತರದಲ್ಲಿರಲಿ. ಪಕ್ಷದ ಲೆಟರ್ಹೆಡ್ಗಿಂತ ಸಂವಿಧಾನದ ಪುಸ್ತಕ ದೊಡ್ಡದಾಗಿರಲಿ. ಸರ್ಕಾರ ಅಥವಾ ಪಕ್ಷದ ಸೂಚನೆಗಿಂತ ಸದನದ ನಿಯಮಾವಳಿ ಮೇಲಾಗಿರಲಿ ಎಂದು ಆಶಿಸಿದರು. ಸಭಾಧ್ಯಕ್ಷರ ಪೀಠದ ಮೇಲೆ ಯಾವುದೇ ಪಕ್ಷದ ಲೆಟರ್ಹೆಡ್ನ ನೆರಳು ಇರದೆ, ಸಂವಿಧಾನದ ನೆರಳು ಮಾತ್ರ ಇರಲಿ ಎಂದು ಹೇಳಿ, ಜಿ.ಎಸ್. ಪಾಟೀಲ್ ಅವರ ಕಾರ್ಯಾವಧಿ ಕರ್ನಾಟಕ ವಿಧಾನಸಭೆಯ ಸಂಸದೀಯ ಘನತೆಯ ಹೊಸ ಅಧ್ಯಾಯವಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.
