
ನವದೆಹಲಿ: ಅಂತಾರಾಷ್ಟ್ರೀಯ ಯುವ ದಿನದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಯುವಜನತೆಯನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರೇರಣಾದಾಯಕ ಸಂದೇಶ ಹಂಚಿಕೊಂಡಿದ್ದಾರೆ. ಯುವ ಸ್ನೇಹಿತರು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಭಾರತದ ಅತ್ಯಂತ ದೊಡ್ಡ ಶಕ್ತಿಯೂ ಆಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ಸಂವೇದನಾಶೀಲತೆ, ಸೇವಾ ಮನೋಭಾವ ಮತ್ತು ಸಾಮರ್ಥ್ಯದ ಮೂಲಕ ಭಾರತೀಯ ಯುವಕರು ವಿಶ್ವದಾದ್ಯಂತ ವಿಶಿಷ್ಟ ಗುರುತನ್ನು ಮೂಡಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದ್ದಾರೆ. ‘ವಿಕಸಿತ ಭಾರತ’ ನಿರ್ಮಾಣದ ಪಯಣದಲ್ಲಿ ದೇಶಕ್ಕೆ ಯುವಜನತೆಯ ಸಕ್ರಿಯ ಭಾಗವಹಿಸುವಿಕೆ ಅಗತ್ಯ ಎಂದು ಹೇಳಿರುವ ಮೋದಿ, ಯುವಕರು ಇಂದು ಕೇವಲ ಭವಿಷ್ಯದ ಕನಸು ಕಾಣುತ್ತಿಲ್ಲ, ಬದಲಾಗಿ ತಮ್ಮ ಸಾಮರ್ಥ್ಯ ಮತ್ತು ಪರಿಶ್ರಮದ ಮೂಲಕ ದೇಶ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ‘ಚಕ್ಷುಷಾ ಮನಸಾ ವಾಚಾ ಕರ್ಮಣಾ ಚ ಚತುರ್ವಿಧಮ್, ಪ್ರಸಾದಯತಿ ಯೋ ಲೋಕಂ ತಂ ಲೋಕೋಽನುಪ್ರಸೀದತಿ’ ಎಂಬ ಸಂಸ್ಕೃತ ಶ್ಲೋಕವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ದೃಷ್ಟಿ, ಮನಸ್ಸು, ಮಾತು ಮತ್ತು ಕಾಯಕ ಎಂಬ ನಾಲ್ಕು ಮಾರ್ಗಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವ ವ್ಯಕ್ತಿಗೆ ಸಮಾಜದಿಂದ ವಿಶ್ವಾಸ, ಗೌರವ ಮತ್ತು ಸದ್ಭಾವನೆ ದೊರೆಯುತ್ತದೆ ಎಂಬುದು ಈ ಶ್ಲೋಕದ ಅರ್ಥವಾಗಿದೆ. ಗುರಿ ಸಾಧಿಸಲು ದೃಢಸಂಕಲ್ಪ ಮತ್ತು ಆತ್ಮವಿಶ್ವಾಸ ಅತ್ಯಗತ್ಯವಾಗಿದ್ದು, ಯುವಕರು ಇಂದು ಮಾಡುವ ಸಣ್ಣ ಕೆಲಸಗಳೂ ನಾಳೆ ದೇಶದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹೊಸ ತಂತ್ರಜ್ಞಾನ, ನಾವೀನ್ಯತೆ ಹಾಗೂ ಆರ್ಥಿಕ ಸ್ವಾವಲಂಬನೆಯ ಕ್ಷೇತ್ರಗಳಲ್ಲಿ ಯುವಕರ ಪಾತ್ರ ನಿರ್ಣಾಯಕವಾಗಿದೆ. ಯುವಶಕ್ತಿಯ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಭಾರತವನ್ನು ಅಭಿವೃದ್ಧಿ ಹೊಂದಿದ, ಆರ್ಥಿಕವಾಗಿ ಬಲಿಷ್ಠ ಮತ್ತು ತಾಂತ್ರಿಕವಾಗಿ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವಲ್ಲಿ ಯುವಜನತೆ ಪ್ರಮುಖ ಶಕ್ತಿಯಾಗಲಿದೆ ಎಂಬ ಸಂದೇಶವನ್ನು ಪ್ರಧಾನಿ ನೀಡಿದ್ದಾರೆ.




