
ಈ ಎರಡು ಮಕ್ಕಳಿಗೋಸ್ಕರ ನಾನಿನ್ನು ಬದುಕಿದೀನಿ ಅಷ್ಟೆ. ಹೀಗೆ ಮಾತಾಡೋ ಹೆಂಗಸರನ್ನ ನೀವು ಖಂಡಿತ ನೋಡಿರ್ತೀರಿ. ಇಂತಹವರು ಊರಿಗೊಬ್ಬರಾದರೂ ಇದ್ದೇ ಇರ್ತಾರೆ. ಸಾಮಾನ್ಯವಾಗಿ ದುಡಿಯಲು ಹೋಗದ ಗಂಡಂದಿರು, ದುಡಿದಿದ್ದನ್ನು ಕುಡಿದು ಕಳೆಯುವ ಗಂಡಂದಿರು, ದುಡಿದ ಹಣವನ್ನೂ ಇನ್ನೊಬ್ಬಾಕೆಯ ಕುಟುಂಬಕ್ಕೆ ಧಾರೆ ಎರೆಯುವ ಗಂಡಂದಿರು ಹೀಗೆ ನಾನಾ ವೆರೈಟಿ ಗಂಡಸರನ್ನು ಮದುವೆ ಆಗಿ ಎರಡು ಮಕ್ಕಳಾಗಿರೋ ಹೆಂಡತಿಯರು ಆಡೋ ಕಾಮನ್ ಮಾತಿದು. ನಂಗೊತ್ತು ಅವರಿಗೆ ಬದುಕು ಕಷ್ಟವಾಗಿರುತ್ತದೆ. ಕಣ್ಣೀರೆಂಬುದು ಕೆನ್ನೆಯ ಮೇಲಿನ ಜೀವನದಿ. ಅಸಹಾಯಕತೆ, ಅಸಹನೆ, ನಿರಾಸೆ, ನಿಟ್ಟುಸಿರು, ಸಿಟ್ಟು, ಇದಿಷ್ಟು ಬಿಟ್ಟು ಇನ್ನೇನು ಇರುವುದಿಲ್ಲ. ತನ್ನ ಕಷ್ಟವನ್ನು ಯಾರಿಗಾದರೂ ಹೇಳಿಕೊಂಡರೆ ಮನಸ್ಸು ಹಗುರವಾದೀತು. ಆದರೆ ಇರುವ ಪರಿಸ್ಥಿತಿ ಬದಲಾಗದು ತಾನೆ? ಕೇಳಿಸಿಕೊಂಡವರು ತನಗನಿಸಿದ ಒಂದೆರಡು ಸಮಾಧಾನದ ಮಾತು ಆಡಿಯಾರು. ಇಲ್ಲವೇ ಸುಳ್ಳೇ ಸಿಂಪಥಿ ತೋರಿಸಿ ಒಳಗೊಳಗೆ ನಕ್ಕಾರು. ಇದನ್ನೆಲ್ಲ ಅನುಭವಿಸಿದ ಹೆಣ್ಣು ಮಗಳು ಇದು ನನ್ನ ಹಣೆಬರಹ, ನಾನು ಪಡೆದು ಬಂದಿದ್ದೇ ಇಷ್ಟು, ಗ್ರಹಚಾರ ಅಂತ ತಮಗೆ ತಾವೇ ಸಮಾಧಾನಿಸಿಕೊಳ್ಳುತ್ತಾರೆ. ಅಫ್ಕೋರ್ಸ್ ಇವರಲ್ಲಿ ತುಂಬಾ ಜನರಿಗೆ ಸತ್ತೇ ಹೋಗಿ ಬಿಡೋಣ ಅಂತ ಅನಿಸಿರುತ್ತೆ. ಅಂಥದ್ದೊಂದು ಯೋಚನೆ ಬಂದಾಗಲೆಲ್ಲ ಮಕ್ಕಳು ನೆನಪಾಗಿ ಬಿಡುತ್ತಾರೆ. ಇದು ನಿಜಕ್ಕೂ ಸಂತಸದ ಸಂಗತಿ. ಆ ನೆಪಕ್ಕಾದರೂ ಆ ತಾಯಂದಿರ ಬದುಕು ಎಕ್ಸ್ಟೆಂಡ್ ಆಗುತ್ತಲ್ಲ. ಕೆಲವು ಸಲ ನಾನು ಯೋಚಿಸುತ್ತೇನೆ. ಈ ದುಃಖ, ಕಷ್ಟ ಅನ್ನುವುದಿದೆಯಲ್ಲ ಇದಕ್ಕೂ ಹೆಂಗಸರನ್ನೂ ಕಂಡರೆ ಪ್ರೀತಿಯಾ? ಇವು ಕೇವಲ ಹೆಣ್ಣು ಮಕ್ಕಳನ್ನೆ ಹುಡುಕಿ ಹೋಗುತ್ತದಾ..? ಅಥವಾ ದುಃಖವನ್ನು ಹೆಂಗಸರೇ ಅಪ್ಪಿಕೊಳ್ಳುತ್ತಾರಾ…? ಹಾಗಾದರೆ ಗಂಡಸರಿಗೆ ದುಃಖ ಇರುವುದಿಲ್ಲವೇ? ಇರುತ್ತೆ ಕಂಡ್ರೀ ತನ್ನೆತ್ತರಕ್ಕೆ ಬೆಳೆದ ಮಗ ತನಗೆ ಎದಿರುತ್ತರ ಕೊಡುವಾಗ, ಕೈ ಹಿಡಿದ ಹೆಂಡತಿಯನ್ನು ಪಕ್ಕದ ಮನೆಯಾತ ಆಸೆಗಣ್ಣಿನಿಂದ ನೋಡಿದಾಗ ಈಕೆಯ ಕಣ್ಸನ್ನೆ, ದುಡಿಯಲು ಹೋದ ಹೆಂಡತಿ ಇನ್ನಾರದೋ ಬಾಹುಗಳಲ್ಲಿ ಬಂಧಿಯಾಗಿದ್ದಾಳೆ ಎನ್ನುವ ಸತ್ಯ ಗೊತ್ತಾದಾಗ ದುಃಖವಾಗದಿರಲು ಆತನಿಗೇನು ಕಲ್ಲು ಹೃದಯವೇ? ಆದರೆ ಆತ ನೋವನ್ನು ಸಹಿಸಿಕೊಳ್ಳುತ್ತಾನೆ. ನುಂಗಿಕೊಳ್ಳೋದು ಅಂತೀವಲ್ಲ ಹಾಗೆ. ಆತ ಯಾರ ಮುಂದೆಯೂ ಕಷ್ಟ ಹೇಳಿಕೊಳ್ಳುವುದಿಲ್ಲ. ಈ ವಿಚಾರ ಇನ್ನೊಮ್ಮೆ ಮಾತಾಡಿದರಾಯ್ತು… ನಾನು ಹೆಂಗಸರ ಕಷ್ಟದ ಬಗ್ಗೆ ಹೇಳಲು ಹೊರಟಿದ್ದೇನೆ. ನನಗನ್ನಿಸುವ ಪ್ರಕಾರ ಬಹುತೇಕ ಹೆಣ್ಣು ಮಕ್ಕಳಿಗೆ ಕಷ್ಟ ಬರುವುದಿಲ್ಲ. ಇವರೇ ಕಷ್ಟವನ್ನು ತಂದು ಕೊಳ್ಳುವುದು. ಮೊದಲು, ಇದು ನನ್ನ ಹಣೆಬರಹ ಅಂತ ಹೇಳಿಕೊಳ್ಳುವುದು ನಿಲ್ಲಿಸಿ. ನೀವು ದುಡಿಯುತ್ತಿದ್ದರೆ ಅದನ್ನು ಭವಿಷ್ಯಕ್ಕೆ ಅಂತ ಉಳಿತಾಯ ಮಾಡಿಕೊಳ್ಳಿ. ನಿಮ್ಮ ದುಡಿಮೆಯ ಹಣ ಸಂಸಾರ ನಿರ್ವಹಣೆಗೆ ಸಾಕಾಗುತ್ತಿದೆ ಅಂತ ಒಂದು ಸಲ ಗಂಡನಿಗೆ ಗೊತ್ತಾದರೆ ಮುಗಿಯಿತು. ಆತ ತನ್ನ ಖರ್ಚಿಗೂ ನಿಮ್ಮ ಮುಂದೆ ಕೈ ಚಾಚುತ್ತಾನೆ! ಹೀಗೆ ಒಂದೊಂದಾಗಿ ಇಡೀ ಸಂಸಾರದ ಜವಾಬ್ದಾರಿಯನ್ನು ನೀವೇ ಮೈಮೇಲೆ ಎಳೆದುಕೊಂಡಾಗಲೇ ನಿಮಗೆ ಅನ್ನಿಸುವುದು ಇದು ನನ್ನ ಹಣೆಬರಹ. ನಿಮ್ಮ ಗಂಡನಿಗೆ ದುಡಿಯುವ ಶಕ್ತಿ ಇದ್ದಾಗ ದುಡಿದು ತರಲು ಹೇಳಿ. ಒಬ್ಬ ಗೃಹಿಣಿಗೆ ಸಂಸಾರ ನಿಭಾಹಿಸುವ ಕಲೆ ಗೊತ್ತಿರಬೇಕು. ಅದಕ್ಕೆ ನೀವು ವಿದ್ಯಾವಂತರಾಗಿರಬೇಕಿಲ್ಲ. ಗಂಡನನ್ನು ಪಳಗಿಸುವ ಜಾಣತನ ನಿಮಗಿರಬೇಕು. ನಮ್ಮಲ್ಲಿ ಕೆಲವು ಹೆಂಗಸರಿರುತ್ತಾರೆ. ಅವರು ದುಡಿಯಲು ಹೊರಟು ನಿಲ್ಲುತ್ತಾರೆ. ಹಾಗೆ ತಂದಿದ್ದರಲ್ಲಿಯೇ ಗಂಡನಿಗೂ ಪಾಕೆಟ್ ಮನಿ, ವಾಟರ್ ಬಿಲ್ಲು, ಮಕ್ಕಳ ಓದು ಎಲ್ಲವನ್ನು ನಿಭಾಯಿಸಿ ಬಿಡುತ್ತಾರೆ. ಆದರೆ ಗಂಡ ಅವರನ್ನು ಪ್ರಶ್ನಿಸುವಂತಿಲ್ಲ! ನನ್ನ ಬಗ್ಗೆ ಕೇಳಬೇಡ ನಿಂಗೆ ಖರ್ಚಿಗೆ ಕೊಟ್ಟಿದೀನಿ ತಾನೆ… ಇಂತಹ ನಡವಳಿಕೆಯ ಹೆಣ್ಣು ಮಕ್ಕಳ ನೇರತನ, ಧೈರ್ಯ ಸುತ್ತಲಿನವರಿಗೆ ಇಷ್ಟವಾಗಬಹುದು. ಆದರೆ ಬೆಳೆಯುತ್ತಿರುವ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಸೋಮಾರಿ ಗಂಡಂದಿರನ್ನು ವರಿಸಿದವರ ಕತೆಯಾದರೆ, ಗಂಡನನ್ನು ಕಳೆದುಕೊಂಡ, ಕುಡಿದು ಬಂದು ಬಡಿಯುವ, ಪ್ರತಿ ಸಣ್ಣ ವಿಚಾರಕ್ಕೂ ಕಾಲು ಕೆರೆದು ಜಗಳವಾಡುವ, ಅನುಮಾನಿಸುವ, ಅವಮಾನಿಸುವ ಗಂಡಂದಿರನ್ನು ಪಡೆದವರ ವ್ಯಥೆ ಬೇರೆಯದೇ ತರನಾಗಿರುತ್ತದೆ. ಅವರಿಗೂ ಕೂಡ ಬದುಕು ದುಸ್ತರ ಎನಿಸಿರುತ್ತದೆ. ಅಂತಹವರು ಕೂಡ ಕೊಂಚ ಜಾಣತನ ಪ್ರದರ್ಶನ ಮಾಡಿಕೊಂಡರೆ ಚಂದನೆಯ ಬದುಕು ಬಾಳಬಹುದು. ಕೊನೆಯದಾಗಿ ಒಂದು ಸಂಗತಿ ಹೇಳಬೇಕಿದೆ. ಕಷ್ಟ ಎನ್ನುವುದು ಕೇವಲ ನಿಮಗೆ ಮಾತ್ರ ಇದೆ ಅಂತ ಅಂದುಕೊಳ್ಳಬೇಡಿ. ನಿಮ್ಮ ಕಷ್ಟ ಹೇಳಿಕೊಳ್ಳುವುದರಲ್ಲೇ ನೀವು ಬಿಜಿಯಾಗಿರೋದ್ರಿಂದ ನಿಮ್ಮ ಎದುರಿಗಿರೋರ ಕಷ್ಟ ಕೇಳುವ ತಾಳ್ಮೆ ನಿಮಗಿಲ್ಲ ಅಷ್ಟೆ. ಕೇಳಿದ್ದರೆ ನಿಮ್ಮಗಿಂತ ಅವರ ಕಷ್ಟ, ಅವರ ನೋವು ದೊಡ್ಡದಿರುತ್ತದೆ. ಆಗ ನಿಮಗೆ ಜಗತ್ತಿನಲ್ಲಿ ನಾನೊಬ್ಬಳೆ ಕಷ್ಟದಲ್ಲಿರುವುದಲ್ಲ, ನೋವು ನನ್ನೊಬ್ಬಳ ಸ್ವತ್ತಲ್ಲ ಎಂಬ ಸತ್ಯ ಗೊತ್ತಾಗುತ್ತೆ…







