
ಇವತ್ತಿಗೂ ನನಗೆ ಅದೊಂದು ಕನ್ಪ್ಯೂಶನ್ ಹಾಗೆ ಉಳಿದು ಹೋಗಿದೆ. ನಾವುಗಳಿಸೋ ಡಿಗ್ರಿ ಸರ್ಟಿಫಿಕೇಟ್ ಕೇವಲ ನಮಗೆ ಉದ್ಯೋಗ ದೊರಕಿಸಿಕೊಡುವ ಕೂಪನ್ನಂತಾಗಿ ಬಿಟ್ಟಿದೆ ಯಲ್ಲವಾ? ಕಲಿಕೆ ಎನ್ನುವುದು ಉದ್ಯೋಗಕ್ಕಾಗಿಯೇ ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಆ ಕಾರಣಕ್ಕಾಗಿಯೇ ಇಂದು ಎಜುಕೇಷನ್ ಅನ್ನುವುದು ಕಮರ್ಶಿಯಲ್ ಆಗಿದೆ. ವಿದ್ಯೆ ವಿನಯವನ್ನು ಕಲಿಸುತ್ತದೆ ಅಂತಲೇ ನಾವೆಲ್ಲ ಅಂದುಕೊಳ್ಳುತ್ತಾ ಬಂದಿದ್ದೇವೆ. ವಿದ್ಯೆ ಸ್ವಾಭಿಮಾನವನ್ನು, ಬದುಕುವ ಮನೋಬಲವನ್ನು, ಪ್ರಾಮಾಣಿಕತೆಯ ನೀತಿಯನ್ನು ಕಲಿಸುತ್ತದೆ ಅನ್ನುವ ನಂಬಿಕೆ ನಮ್ಮಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ವಿದ್ಯೆ ಕಲಿತವರಲ್ಲಿ ಈ ಯಾವ ಗುಣಗಳು ಕಾಣಿಸುತ್ತಿಲ್ಲ! ನೀವು ಗಮನಿಸಿ ನೋಡಿ… ದೊಡ್ಡ ಮಟ್ಟದ ವಂಚಕರಾದವರು ಮತ್ತು ಅವರಿಂದ ಮೋಸ ಹೋಗುವವರು ವಿದ್ಯಾವಂತರೇ ಆಗಿರುತ್ತಾರೆ! ಅದು ಹಾಗಿರಲಿ ನಾನು ಆಗಲೇ ಹೇಳಿದಂತೆ ವಿದ್ಯೆ ಬದುಕುವ ಛಲವನ್ನು ಸ್ವಾಭಿಮಾನವನ್ನು ಕಲಿಸಬೇಕಲ್ಲವೇ? ಇಂದು ಅದಾಗುತ್ತಿಲ್ಲ ನಮ್ಮಲ್ಲಿ ಕಾಲೇಜು ಮೆಟ್ಟಿಲು ಹತ್ತಿದ ಯುವಕ ನೇಗಿಲು ಹಿಡಿದು ಬೇಸಾಯ ಮಾಡಲು ಹೊರಡಲಾರ! ಡಿಗ್ನಿಟಿಗೆ ಕಡಿಮೆ ಎಂದುಕೊಳ್ಳುತ್ತಾನೆ. ನಮ್ಮ ದೇಶದ ಒಂದು ತಮಾಷೆಯ ಸಂಗತಿ ನೋಡಿ.. ಇಲ್ಲಿ ನಿರುದ್ಯೋಗ ಸಮಸ್ಯೆಯೂ ಇದೆ, ಕಾರ್ಮಿಕರ ಕೊರತೆಯೂ ಇದೆ! ಕೃಷಿ ಚಟುವಟಿಕೆಗೆ ಕಾರ್ಮಿಕರಿಲ್ಲ ಎಂಬುದು ಹಳೇಯ ಮಾತಾಯಿತು. ಈ ಹೊಟೇಲ್ ಉದ್ಯಮ, ಗಾಮೆಂಟ್ಸ್, ಕಾರ್ಖಾನೆ ಹೀಗೆ ನಾನಾ ಕ್ಷೇತ್ರಗಳಲ್ಲಿ ಕಾರ್ಮಿಕರಿಗೆ ಬೇಡಿಕೆ ಇದೆ. ಕೈಯಲ್ಲೊಂದು ಡಿಗ್ರಿ ಸರ್ಟಿಫಿಕೇಟ್ ಹಿಡಿದು ಕುಳಿತ ಹುಡುಗ ಹೋಟೇಲ್ನಲ್ಲಿ ದುಡಿಯಲು ಹಿಂಜರಿಯುತ್ತಾನೆ. ಅವನ ಘನತೆಗೆ ತಕ್ಕದ್ದಲ್ಲ ಎಂಬುದು ಆತನ ಮನಸ್ಥಿತಿ. ಹಾಗದರೆ ಆತನ ಕೈಯೊಳಗಿನ ಆ ಡಿಗ್ರಿ ಯಾವುದನ್ನು ಕಲಿಸಿದೆ? ನಮ್ಮೊಳಗಿನ ಆತ್ಮ ವಿಶ್ವಾಸವನ್ನು, ಸ್ವಾಭಿಮಾನವನ್ನ, ದುಡಿಯಲೇಬೇಕು ಎಂಬ ಛಲವನ್ನು ಹುಟ್ಟಿಸಬಹುದಾದ ಯಾವ ಸಬ್ಜೆಕ್ಟ್ ಗಳು ಕೂಡ ನಮ್ಮ ಡಿಗ್ರಿ ಸರ್ಟಿಫಿಕೇಟಿನಲ್ಲಿ ಅಡಕವಾಗಿಲ್ಲ! ಪ್ರತಿಯೊಬ್ಬನು ಕೂಡ ಓದು ಮುಗಿಸಿ ಎಸಿ ರೂಮಿನಲ್ಲಿ ಕುಳಿತು ಫೈಲ್ ನೋಡುವ ಉದ್ಯೋಗದ ಕಲ್ಪನೆಯಲ್ಲಿಯೇ ಇರುತ್ತಾರೆಯೇ ಹೊರತು, ಬೆವರು ಹರಿಸಿ ದುಡಿಮೆಗೆ ಅಂಟಿಕೊಳ್ಳುವುದನ್ನು ಡಿಗ್ನಿಟಿಗೆ ಕಡಿಮೆ ಎಂದುಕೊಳ್ಳುವವರೆ ಹೆಚ್ಚಾಗಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಮ್ಮ ಯುವ ಜನತೆಗೆ ನಾಲೆಡ್ಜ್ ಹೆಚ್ಚಾಗಿದೆ. ಆದರೆ ಕಾಮನ್ಸೆನ್ಸ್ ಕಡಿಮೆಯಾಗಿದೆ! ತಂದೆ ತಾಯಿಗಳಿಗಾದರೂ ಅಷ್ಟೆ ತಮ್ಮ ಮಗುವಿನ ಆಸಕ್ತಿ, ಅಭಿರುಚಿಗಿಂತ ನಮ್ ಮಗನ ಸ್ಕೂಲ್ ಬಗ್ಗೆ ಹೇಳಿಕೊಳ್ಳೋದರ ಬಗ್ಗೆಯೇ ಚಿಂತಿಸುತ್ತಾರೆ. once again ಪ್ರೆಸ್ಟೀಜ್.
ಇದು ಒಂದು ತರಹದ ಸಮಸ್ಯೆ ಎನಿಸಿಕೊಂಡರೆ.. ಓದಿ ಉದ್ಯೋಗದಲ್ಲಿರೋ ಮಂದಿಯದ್ದು ಇನ್ನೊಂದು ರೀತಿ. ಮೊನ್ನೆ ಬೆಂಗಳೂರಿನ ಮಿತ್ರನೊಬ್ಬ ಹೇಳುತ್ತಿದ್ದ ಈಗ ಗಲ್ಲಿ ಗಲ್ಲಿಯಲ್ಲಿ ವೃದ್ದಾಶ್ರಮ ತಲೆ ಎತ್ತಿವೆ. ಈಗಿನ ಮಕ್ಕಳಿಗೆ ಅಜ್ಜ ಅಜ್ಜಿಯ ಪ್ರೀತಿ ಸಿಗುತ್ತಲೇ ಇಲ್ಲ ಅಂತ.. ನಮ್ಮ ಮಲೆನಾಡಿನಲ್ಲಿ ವೃದ್ದಾಶ್ರಮಗಳ ಹಾವಳಿ ಅಷ್ಟಿಲ್ಲ. ಆದರೆ ಇಲ್ಲಿನ ಪ್ರತಿ ಮನೆಯೂ ಒಂದೊಂದು ವೃದ್ದಾಶ್ರಮವಾಗಿದೆ! ಕಾರಣ ಇಲ್ಲಿ ಪ್ರತಿ ಮನೆಯ ಮಗ/ ಮಗಳು ಪಟ್ಟಣದ ವಾಸಿಗಳಾಗಿದ್ದಾರೆ. ಮನೆಯಲ್ಲಿ ವೃದ್ದ ತಂದೆ, ತಾಯಿಗಳು ಮಾತ್ರ ಉಳಿದಿದ್ದಾರೆ. ದಿನದಿಂದ ದಿನಕ್ಕೆ ಆಗುತ್ತಿರುವ ಈ ಬದಲಾವಣೆ ನಮ್ಮ ನಡುವಿನ ಪ್ರೀತಿ, ವಾತ್ಸಲ್ಯದ ಮೌಲ್ಯವನ್ನೇ ಶೂನ್ಯಗೊಳಿಸುತ್ತಿದೆ. ಬದುಕು ಯಾಂತ್ರಿಕವಾದಂತೆಲ್ಲ ನಮ್ಮ ಸಂಬಂಧಗಳ ಅಟಾಚ್ಮೆಂಟ್ ಸಡಿಲಗೊಳ್ಳುತ್ತಿದೆ. ಈ ಆತಂಕವನ್ನು ನಾವು ಕಂಡೂ ಕಾಣದಂತೆ ಯಾಕಿದ್ದೇವೆ? ವ್ಯವಸ್ಥೆಗೆ ಹೊಂದಿಕೊಳ್ಳುವ ಅನಿವಾರ್ಯತೆಗೆ ಸಿಕ್ಕಿ ಬಿದ್ದದ್ದೀವಾ? ಉದ್ಯೋಗದ ನೆಪದಲ್ಲೋ, ಸಂಪಾದನೆಯ ಹುಚ್ಚಿಗೋ, ಕಲಿತಿದ್ದೀವಿ ಅನ್ನೋ ಗರ್ವದಿಂದಲೋ ಅಥವಾ ಸ್ಟೇಟಸ್ ತೋರಿಸಿಕೊಳ್ಳುವ ಸಲುವಾಗಿ ಮನೆ ಬಿಟ್ಟು ಪ್ರೀತಿಸುವ ಜನರ ಮನ ಬಿಟ್ಟು ಹೋಗುವುದು ಅನಿವಾರ್ಯವಾ? ಬದುಕಿ ಗಳಿಸಿದ್ದು ಎಷ್ಟಾದರೂ ಹೊಟ್ಟೆಗೆ ಹಿಡಿದ್ದಷ್ಟೆ ಊಟ ಮಾಡಬೇಕು. ಹೋಗುವಾಗ ಬರಿಗೈ, ಹಾಗಿರುವಾಗ ಬಂಧು ಬಳಗದವರಿಂದ ದೂರಾಗಿ ಗಳಿಸುವ ಅನಿವಾರ್ಯತೆ ಏನಿದೆ? ಕೊನೆಯದೊಂದು ಮಾತು… ತುಂಬಾ ಓದಿಕೊಂಡವರು ಪುಟ್ಟ ನೌಕರಿಯಲ್ಲಿದ್ದರೆ ಅದೇನು ಅಷ್ಟು ಓದಿ ಈ ಕೆಲಸ ಅಂತ ರಾಗ ತೆಗೆಯದಿರಿ ಊರ ಉಸಾಬರಿ ನಿಮಗೇಕೆ ಅವರ ಬದುಕು ಅವರ ಖುಷಿ ಹೌದಲ್ವಾ?







