
ಚನ್ನಗಿರಿ: ಅಕ್ಕಿಯಲ್ಲಿ ಹುಳೋ ಅಥವಾ ಹುಳದಲ್ಲಿ ಅಕ್ಕಿಯೋ ಎನ್ನುವುದೇ ತಿಳಿಯದ ಸ್ಥಿತಿಯಲ್ಲಿರುವ ಆಹಾರವನ್ನು ಸೇವಿಸುತ್ತಿರುವ ಹಾಸ್ಟೆಲ್ ವಿದ್ಯಾರ್ಥಿಗಳ ದುಸ್ಥಿತಿ ಬೆಳಕಿಗೆ ಬಂದಿದೆ. ಚನ್ನಗಿರಿ ತಾಲೂಕಿನ ಎರಡನೇ ದೊಡ್ಡ ಹೋಬಳಿಯಾದ ಸಂತೆಬೆನ್ನೂರಿನ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಇತ್ತೀಚೆಗೆ ನಿರ್ಮಾಣಗೊಂಡಿರುವ ಡಾ. ಬಿ.ಆರ್. ಅಂಬೇಡ್ಕರ್ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದಲ್ಲಿ ಆಹಾರಧಾನ್ಯಗಳ ಸಂಗ್ರಹ ಮತ್ತು ನಿರ್ವಹಣೆಯಲ್ಲಿ ಭಾರೀ ನಿರ್ಲಕ್ಷ್ಯ ಕಂಡುಬಂದಿದೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿಗಳಿಗೆ ನೀಡಲು ಸಂಗ್ರಹಿಸಿರುವ ಅಕ್ಕಿ, ರವೆ, ಬೇಳೆ ಸೇರಿದಂತೆ ಯಾವುದೇ ಡಬ್ಬಿಯನ್ನು ತೆರೆದರೂ ಹುಳುಗಳೇ ಕಂಡುಬರುತ್ತಿವೆ ಎಂದು ಆರೋಪಿಸಲಾಗಿದ್ದು, ವಿದ್ಯಾರ್ಥಿಗಳು ಇದೇ ಆಹಾರವನ್ನು ಸೇವಿಸುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಕಳೆದ ವರ್ಷ ಉದ್ಘಾಟನೆಗೊಂಡಿರುವ ಈ ಹಾಸ್ಟೆಲ್ನಲ್ಲಿ ವಾರ್ಡನ್ ಶ್ರೀನಿವಾಸ್ ಅವರು “ಆಡಿದ್ದೇ ಆಟ, ಮಾಡಿದ್ದೇ ಊಟ” ಎನ್ನುವ ರೀತಿಯಲ್ಲಿ ಯಾವುದೇ ಮೇಲ್ವಿಚಾರಣೆಯಿಲ್ಲದೆ ಆಡಳಿತ ನಡೆಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ. ಚನ್ನಗಿರಿ ತಾಲೂಕಿನ ಸರ್ಕಾರಿ ಹಾಸ್ಟೆಲ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಾರ್ಡನ್ಗಳಿಗೆ ಹೇಳುವವರೂ ಇಲ್ಲ, ಕೇಳುವವರೂ ಇಲ್ಲದ ಕಾರಣ ಅವರದ್ದೇ ದರ್ಬಾರ್ ನಡೆಯುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಲೂಕು ಹಾಗೂ ಜಿಲ್ಲಾಡಳಿತದ ಅಧಿಕಾರಿಗಳಿಗೆ ಈ ಭ್ರಷ್ಟಾಚಾರ ಮತ್ತು ಅವ್ಯವಸ್ಥೆಯ ಬಗ್ಗೆ ಮಾಹಿತಿ ಇದ್ದರೂ ಗೊತ್ತಿಲ್ಲದಂತೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದ್ದು, “ತಾಲ್ಲೂಕಿನಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರಗಳಲ್ಲಿ ಇದು ಕೇವಲ ಟ್ರಯಲ್ ಮಾತ್ರ” ಎಂದು ಆರೋಪಿಸಿರುವ ಸ್ಥಳೀಯರು, ಸಮಾಜ ಕಲ್ಯಾಣ ಇಲಾಖೆಯ ಹಿರಿಯ ಅಧಿಕಾರಿಗಳು ತಕ್ಷಣ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಒದಗಿಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ, ಮಾನ್ಯ ಶಾಸಕರು ಸರ್ಕಾರಿ ಹಾಸ್ಟೆಲ್ಗಳತ್ತ ವಿಶೇಷ ಗಮನಹರಿಸಿ ಬಡ ವಿದ್ಯಾರ್ಥಿಗಳ ಪಾಲಿಗೆ ರಕ್ಷಕರಾಗಬೇಕು ಎಂಬ ಆಗ್ರಹಿಸಿದ್ದಾರೆ.




