
ಮೊನ್ನೆ ಅಣ್ಣ ತಮ್ಮರಿಬ್ಬರ ಆಸ್ತಿ ಜಗಳವನ್ನು ಬಗೆಹರಿಸಲು ಒಂದಿಷ್ಟು ಹಿರಿಯರು ಸೇರಿದ್ದರು. ಅವರಲ್ಲೊಂದಿಬ್ಬರು ನನಗೂ ಆಹ್ವಾನಿಸಿದ್ದರಿಂದ ನಾನು ಹೋಗಿದ್ದೆ. ಅನೇಕ ವರ್ಷಗಳಿಂದ ಒಂದಾಗಿದ್ದ ಮನೆಯನ್ನು ಒಡೆಯಲು ನಾವು ಹೋಗಿದ್ದು ಅಂತ ಹೇಳಿದರೆ ಆ ಎಲ್ಲಾ ಹಿರಿಯರಿಗೂ ಬೇಸರವಾಗಬಹುದೇನೋ, ಆದರೆ ನಿಜಕ್ಕು ಹೋಗಿದ್ದು ಮಾತ್ರ ಅದಿಕ್ಕೆ. ಒಬ್ಬರ್ಯಾರೋ ಆ ಮನೆಯಲ್ಲಿನ ವಸ್ತುಗಳನ್ನೆಲ್ಲ ಪಟ್ಟಿ ಮಾಡಲು ಶುರುಮಾಡಿದರೆ ಪಾತ್ರೆಗಳು, ಅಲ್ಮೆರಾ, ಹನ್ನೊಂದು ತಾಮ್ರದ ಚೊಂಬು, ಬಿಂದಿಗೆ, ದೀಪದ ಕಂಬಗಳು, ಬೆಳ್ಳಿ-ತಾಮ್ರ ಪ್ರತ್ಯೇಕ ಹೀಗೆ ಒದೊಂದಾಗಿ ಪಟ್ಟಿ ಮಾಡುತ್ತಾ ಹೋದಂತೆ ಅವುಗಳಲ್ಲಿ ಬಿರುಕು ಮೂಡಿಸುತ್ತಿದ್ದೇವೆ ಎಂಬ ಭಾವ ನನ್ನಲ್ಲಿ. ಯಾಕೆ ಹೀಗೆ ಹೇಳುತ್ತಿದ್ದೇನೆ ಎಂದರೆ ನೀವು ಆ ವಸ್ತುಗಳನ್ನ ಕೇವಲ ವಸ್ತುವಾಗಿ ನೋಡಿದರೆ ನಿಮಗೆ ಏನು ಅನಿಸುವುದಿಲ್ಲ. ಆದರೆ ಆ ವಸ್ತುಗಳೊಂದಿಗೆ ಒಂದು ಭಾವನಾತ್ಮಕ ಸಂಬಂಧದ ಎಳೆ ತಳಕು ಹಾಕಿಕೊಂಡಿರುತ್ತದೆ. ಆಗ ನಿಮಗೆ ಅಂತಹ ವಸ್ತುಗಳನ್ನು ಕಳೆದುಕೊಳ್ಳುವಾಗ ಯಾತನೆ ಆಗುತ್ತದೆ. ಅದೊಂಥರ ಪುಟ್ಟ ಕಂದನ ಕೈಯಿಂದ ಗೊಂಬೆಯನ್ನು ಕಿತ್ತುಕೊಂಡಂತೆ! ಆ ಮನೆ ಗೋಡೆಯ ಮೇಲೆ ಹಿರಿಯ ಮಗನ ಮದುವೆಯಲ್ಲಿ ಬರೆದ ಗಂಡು ಹೆಣ್ಣಿನ ಹೆಸರನ್ನು ಬಣ್ಣ ಬಳಿದು ಅಳಿಸಬಹುದು. ಆದರೆ ಅದನ್ನು ಬರೆಯುವಾಗ ಬಂದು ಸೇರಿದ ಬಳಗ, ತಮಾಷೆಯ ಚಟಾಕಿ, ಅತ್ತಿಗೆಯನ್ನು ಮನೆ ತುಂಬಿಸಿಕೊಳ್ಳೋ ಸಂಭ್ರಮ ಇತ್ತಲ್ಲಾ…? ಅದಕ್ಕಾವ ಬಣ್ಣ? ಆ ದೊಡ್ಡ ಮನೆಯ ಕತ್ತಲ ಕೋಣೆಯೊಳಗೆ ದೊಡ್ಡಣ್ಣನ ಮಗುವನ್ನು ಸೂಲಗಿತ್ತಿ ಹೆರಿಗೆ ಮಾಡಿಸಿ ಗಂಡು ಅಂತ ಹೊರಬಂದು ಹೇಳಿದ್ದು, ಆಮೇಲೆ ಮನೆಯ ಅಂಗಳದ ಸೆರಗಿನಲ್ಲಿದ್ದ ಬಚ್ಚಲು ಮನೆಯ ಕಲ್ಲಿನ ಮೇಲೆ ದೊಡ್ಡಮ್ಮ ಪುಟ್ಟ ಮಣೆಯಿಟ್ಟುಕೊಂಡು ಕಾಲು ಚಾಚಿ ಮಗುವಿಗೆ ಸ್ನಾನ ಮಾಡಿಸಿದ್ದು… ಹೀಗೆ ನೆನಪುಗಳನ್ನು ಕೆದುಕುತ್ತಾ ಹೋದಂತೆ ರಾಶಿ ರಾಶಿಯಾಗುತ್ತದೆ. ಆದರೆ ದುರಂತ ನೋಡಿ, ಇವತ್ತು ಬೆಳೆದು ನಿಂತ ಮಗನಿಗೆ, ಆ ಕತ್ತಲ ಕೋಣೆಯ ಬಗ್ಗೆ ಯಾವ ಭಾವನೆಯೂ ಇಲ್ಲ! ಮೂಲೆಯಲ್ಲಿ ಬಿದ್ದ ಮಣೆ ಯಾರಿಗೂ ಬೇಡ! ಅದೆಷ್ಟೋ ಅಭ್ಯಂಗನಕ್ಕೆ ನೀರು ಕಾಯಿಸಿಕೊಟ್ಟ ಹಂಡೆಗೆ ಬೆಲೆ ಕಟ್ಟಲು ಹೊರಟಿದ್ದಾರೆ. ಛೇ ಮನುಷ್ಯನಿಗೆ ಯಾಕೆ ಭಾವುಕರಾಗಿ, ಭಾವನಾತ್ಮಕವಾಗಿ ನಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾವು ಒಂದು ಬಾಡಿಗೆ ಮನೆಯಲ್ಲಿದ್ದು, ಅದನ್ನು ಖಾಲಿ ಮಾಡುವ ಸಂದರ್ಭದಲ್ಲೂ ಕೂಡ ಏನೋ ಒಂಥರಾ ಫೀಲ್ ಆಗುತ್ತೆ. ನಿಮ್ಮ ಪುಟ್ಟ ಮಗು ಗೋಡೆಯಲ್ಲಿ ಗೀಚಿದ ಚಿತ್ರವನ್ನು ಬಿಟ್ಟು ಬರಲು ಆಗುವುದೇ ಇಲ್ಲ. ಆದರೆ ಮನುಷ್ಯ ಬರಬರುತ್ತಾ ಎಲ್ಲವನ್ನು ಲಾಭ ನಷ್ಟದ ಲೆಕ್ಕಾಚಾರದಲ್ಲಿಯೇ ನೋಡುವುದು ನಿಜಕ್ಕು ಆತಂಕಕಾರಿ ಸಂಗತಿ. ಇನ್ನೊಂದು ಸಂಗತಿ ಗೊತ್ತಾ? ಅಪ್ಪನ ಆಸ್ತಿ, ಯಜಮಾನಿಕೆ, ಅವರ ಬೈಕು ಹೀಗೆ ಅಪ್ಪ ಗಳಿಸಿದ್ದನ್ನೆಲ್ಲ ಮಕ್ಕಳು ನಮಗೇ ಅಂತ ಪಾಲು ಮಾಡಿಕೊಂಡು ಬಿಡುತ್ತಾರೆ. ಮಕ್ಕಳಿಗೆ ಬೇಕಾದಷ್ಟು ಮಾಡಿಟ್ಟಿರೋ ಕೆಲ ಅಪ್ಪಂದಿರು, ತಾವು ಒಂದಿಷ್ಟು ಸ್ವಯಾರ್ಜಿತ ಆಸ್ತಿ ಮಾಡಿಟ್ಟುಕೊಂಡಿರುತ್ತಾರೆ.. ಅದೇನು ಗೊತ್ತಾ? ಊರಿನಲ್ಲೊಂದು ಘನತೆ, ಮರ್ಯಾದೆ, ಸಜ್ಜನಿಕೆ, ದಾನ, ಪರೋಪಕಾರ ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ಅವರು ಹೆಗ್ಗಳಿಕೆ ಗಳಿಸಿಕೊಂಡಿರುತ್ತಾರೆ. ಇದು ನಿಜವಾದ ಆಸ್ತಿ. ಆದರೆ ಈ ಆಸ್ತಿಯನ್ನು ಯಾವ ಮಕ್ಕಳು ಹಂಚಿಕೊಳ್ಳುವುದಿಲ್ಲ. ಅದು ಅಪ್ಪನ ಹೆಸರಿನೊಂದಿಗೇ ಮಣ್ಣಾಗಿ ಬಿಡುತ್ತದೆ! ಇದು ಎಂಥಹ ವಿಪರ್ಯಾಸ ಅಲ್ಲವಾ? ಅಪ್ಪನ ಅಧಿಕಾರ, ಆಸ್ತಿಗೆ ಕೊಟ್ಟಷ್ಟೆ ಮಹತ್ವವನ್ನು ಅವರು ಗಳಿಸಿಕೊಂಡ ವ್ಯಕ್ತಿ ತ್ವವನ್ನು ಕಾಪಾಡಿಕೊಳ್ಳಬೇಕಲ್ಲವಾ? ಮುಂದೆ ನಮ್ಮ ಮಕ್ಕಳಿಗೆ ಅದೇ ತಾನೆ ಆಸ್ತಿ! ನಾನು ಹೇಳಿದ್ರಲ್ಲಿ ತಪ್ಪಿದೆಯಾ…?







