
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗಂಡಗಟ್ಟದ ಗುಬ್ಬಗೋಡು ಗ್ರಾಮದ ನಿವಾಸಿ ಶಾಂತ ಎಂಬ
ಮಹಿಳೆ ಮೇಲೆ ಸಂಘದ ಸಾಲದ ವಿಚಾರವಾಗಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದ್ದು, ಜುಲೈ 1ರಂದು ಸಂಜೆ ಸುಮಾರು 5 ಗಂಟೆಗೆ ಧರ್ಮಸ್ಥಳ ಸಂಘದ ಸಾಲಕ್ಕೆ ಅರ್ಜಿ ಸಲ್ಲಿಸಿದ್ದ ವೇಳೆ ಘಟನೆ ನಡೆದಿದೆ. ಶಾಂತ ಅವರಿಗೆ ಗರ್ಭಕೋಶದ ಚಿಕಿತ್ಸೆ ಒಳಗಾಗಿದ್ದ ಕಾರಣ ಕಳೆದ ಒಂದು ವರ್ಷದಿಂದ ಸಂಘದ ಯಾವುದೇ ಸಭೆಗಳಿಗೆ ಹಾಜರಾಗಿರಲಿಲ್ಲ. ಈಗ ಸಾಲಕ್ಕಾಗಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ಶಾಂತ ಅವರಿಗೆ ಸಂಘದ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ನಡೆದಿದ್ದು, ಈ ನಡುವೆ ಅನಿತಾ, ಪ್ರಿಯಾ ಹಾಗೂ ಶಶಿಕಲಾ ಎಂಬ ಸದಸ್ಯರು ತೀವ್ರ ವೀರೋದ ವ್ಯಕ್ತಪಡಿಸಿದ್ದು, ಶಶಿಕಲಾ ಎಂಬುವವರು ಚಪ್ಪಲಿಯಿಂದ ಹಲ್ಲೆಗೆ ಮುಂದಾದರು ಎಂದು ಶಾಂತ ಅವರು ಆರೋಪಿಸಿದ್ದಾರೆ. ಬಳಿಕ ಸುರೇಶ್, ವಿಜಯೇಂದ್ರ ಹಾಗೂ ಅಭಿಷೇಕ್ ಎಂಬುವವರನ್ನು ಸ್ಥಳಕ್ಕೆ ಕರೆಸಿದ ಶಶಿಕಲಾ, ದೊಣ್ಣೆ ಮತ್ತು ಹರಿತವಾದ ವಸ್ತುವಿನಿಂದ ಶಾಂತ ಹಾಗೂ ಅವರ ಪುತ್ರನ ಮೇಲೆ ಹಲ್ಲೆ ನಡೆಸಿದ್ದಾಗಿ ತಿಳಿಸಿದ್ದಾರೆ. ದೂರು ನೀಡಿದರೆ ಕೋವಿಯಿಂದ ಹೊಡೆದು ಸಾಯಿಸುವುದಾಗಿ ಶಾಂತ ಅವರಿಗೆ ಜೀವ ಬೆದರಿಕೆ ಹಾಕಿದ್ದು, ವಿಜಯೇಂದ್ರ ಅವರು ಶಾಂತ ಅವರ ಕುತ್ತಿಗೆಯಲ್ಲಿದ್ದ 21ಗ್ರಾಂ ಮಂಗಳಸೂತ್ರವನ್ನು ಕಿತ್ತೆಸೆದಿದ್ದಾರೆ ಎಂದು ಆರೋಪಿಸಿದ್ದಾರೆ. ಸದ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವ ಶಾಂತರವರು ಮಹಿಳೆ ಎಂಬುದನ್ನ ಲೆಕ್ಕಿಸದೆ ಮಾರಣಾಂತಿಕ ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದು, ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜೈ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ.




