
ಬೆಂಗಳೂರು: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 750 ಅರಣ್ಯ ವೀಕ್ಷಕ (Forest Watcher) ಹುದ್ದೆಗಳ (ಉಳಿಕೆ ಮೂಲ ವೃಂದ–700, ಕಲ್ಯಾಣ ಕರ್ನಾಟಕ–50) ನೇರ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದ್ದು, ಇಲಾಖೆಯು ಕರಡು ಅಧಿಸೂಚನೆ ಸಿದ್ಧಪಡಿಸಿ ಆರ್ಥಿಕ ಇಲಾಖೆಯ ಸಹಮತಿಯನ್ನೂ ಪಡೆದಿದೆ. ಅಧಿಕೃತ ಅಧಿಸೂಚನೆ ಶೀಘ್ರದಲ್ಲೇ ಪ್ರಕಟವಾಗಲಿದ್ದು, 2026ರ ಆಗಸ್ಟ್ 1ರಿಂದ 31ರವರೆಗೆ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅರ್ಜಿ ಶುಲ್ಕ ಪಾವತಿಸಲು ಸೆಪ್ಟೆಂಬರ್ 2 ಕೊನೆಯ ದಿನವಾಗಿದೆ. ಎಸ್ಎಸ್ಎಲ್ಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಕನಿಷ್ಠ ವಯಸ್ಸು 18 ವರ್ಷ ಇರಬೇಕು. ಸಾಮಾನ್ಯ, 2ಎ, 2ಬಿ, 3ಎ ಹಾಗೂ 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ, ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ 32 ವರ್ಷ, ಮಾಜಿ ಸೈನಿಕರಿಗೆ 33 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಎಲ್ಲಾ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಸಾಮಾನ್ಯ ಪುರುಷ ಅಭ್ಯರ್ಥಿಗಳಿಗೆ ₹200, ಮಹಿಳೆ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ₹100, ಎಸ್ಸಿ, ಎಸ್ಟಿ ಹಾಗೂ ಪ್ರವರ್ಗ-1 ಪುರುಷ ಅಭ್ಯರ್ಥಿಗಳಿಗೆ ₹100, ಮಹಿಳೆ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳಿಗೆ ₹50 ಅರ್ಜಿ ಶುಲ್ಕ ನಿಗದಿಯಾಗಿದ್ದು, ವಿಶೇಷ ಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಆಯ್ಕೆಯಾದವರಿಗೆ ₹27,500–46,675 ವೇತನ ಶ್ರೇಣಿ ದೊರೆಯಲಿದೆ. ಅಭ್ಯರ್ಥಿಗಳನ್ನು ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ 1:20 ಅನುಪಾತದಲ್ಲಿ ಶಾರೀರಿಕ ಮಾನದಂಡ ಪರೀಕ್ಷೆ (PST), ದೈಹಿಕ ತಾಳ್ವಿಕೆ ಪರೀಕ್ಷೆ (PET) ಹಾಗೂ ದೈಹಿಕ ಕಾರ್ಯಸಮರ್ಥತೆ ಪರೀಕ್ಷೆಗೆ (Physical Efficiency Test) ಆಯ್ಕೆ ಮಾಡಲಾಗುವುದು. ಈ ಪರೀಕ್ಷೆಗಳಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳ ಎಸ್ಎಸ್ಎಲ್ಸಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ, ದಾಖಲೆ ಪರಿಶೀಲನೆಯ ಬಳಿಕ 1:1 ಅನುಪಾತದಲ್ಲಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.




