
ಕೋಟ: ಗಾಣಿಗ ಯುವ ಸಂಘಟನೆ (ರಿ.) ಕೋಟ ಆಶ್ರಯದಲ್ಲಿ “ಯುವ ಸಂಗಮ” ಕಾರ್ಯಕ್ರಮದ ಅಂಗವಾಗಿ ಕೋಟದ ವಿವೇಕ ವಿದ್ಯಾಸಂಸ್ಥೆಯ ಎಂ.ಜಿ.ಎಂ. ಸಭಾಂಗಣದಲ್ಲಿ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಯಕ್ಷಗಾನ ಕೇಂದ್ರ ಉಡುಪಿಯ ಹಿರಿಯ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ ಅವರು ಹಿರಿಯ ಯಕ್ಷಗಾನ ಕಲಾವಿದ ಹೆರಂಜಾಲು ಸುಬ್ಬಣ್ಣ ಗಾಣಿಗರಿಗೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ಪ್ರದಾನ ಮಾಡಿ, ಯಕ್ಷಗಾನ ಕಲೆಗೆ ಹಾರಾಡಿ ಮನೆತನ ಹಾಗೂ ಗಾಣಿಗ ಸಮಾಜದ ಕೊಡುಗೆ ಅವಿಸ್ಮರಣೀಯವಾಗಿದ್ದು, ಡಾ. ಶಿವರಾಮ ಕಾರಂತರ ತಂಡದಲ್ಲಿ ಗಾಣಿಗ ಸಮಾಜದ ಕಲಾವಿದರಿಗೆ ಅಗ್ರಸ್ಥಾನವಿತ್ತು. ಒಂದು ಊರಲ್ಲಿ ಹಲವು ಮೇಳಗಳಿಗೆ ಸಾಕಾಗುವಷ್ಟು ಪ್ರಬುದ್ಧ ಕಲಾವಿದರಿದ್ದು, ಗಾಣಿಗ ಸಮಾಜದ ಯಕ್ಷಗಾನ ಕ್ಷೇತ್ರದ ಸಾಧನೆಯನ್ನು ಇದು ಬಿಂಬಿಸುತ್ತದೆ. ಹಾರಾಡಿ ಮಹಾಬಲ ಗಾಣಿಗರು ಅತ್ಯಂತ ಶಿಸ್ತಿನ ಹಾಗೂ ಪರಿಪೂರ್ಣ ಕಲಾವಿದರಾಗಿದ್ದು, ಅವರ ನೆನಪಿನಲ್ಲಿ ಆಯೋಜಿಸಿದ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಪ್ರಶಸ್ತಿ ಸ್ವೀಕರಿಸಿದ ಹೆರಂಜಾಲು ಸುಬ್ಬಣ್ಣ ಗಾಣಿಗ ಅವರು, ಯಕ್ಷಗಾನವೇ ತಮ್ಮ ಸರ್ವಸ್ವವಾಗಿದ್ದು, ಯಾವುದೇ ಪ್ರಶಸ್ತಿಗಾಗಿ ಆಸೆಪಟ್ಟವರಲ್ಲ. ಆದರೆ ಹಾರಾಡಿ ಮಹಾಬಲ ಗಾಣಿಗ ಪ್ರಶಸ್ತಿ ತಮಗೆ ಮರುಹುಟ್ಟಿನಷ್ಟು ಸಂತಸ ತಂದಿದೆ ಎಂದು ಹೇಳಿದರು. ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಉಪಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರೆ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಪ್ರತಿಭಾ ಪುರಸ್ಕಾರ ವಿತರಿಸಿದರು. ಗಾಣಿಗ ಯುವ ಸಂಘಟನೆ (ರಿ.) ಕೋಟದ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಟಕ್ಕಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ದೈವ ಪರಿಚಾರಕರಾದ ಶ್ರೀ ನಾರಾಯಣ ಗಾಣಿಗ ಕಾರ್ಕಡ, ಸಾಧಕ ಹೈನುಗಾರ ಮಹಿಳೆ ನಾಗರತ್ನ ಜನಾರ್ದನ ಗಾಣಿಗ ಮಾಬುಕಳ, ರಾಜೇಶ್ ಗಾಣಿಗ ಹಾಗೂ ರೋಟರಿ ಕೋಟ ಸಿಟಿಯ ನೂತನ ಅಧ್ಯಕ್ಷ ರಾಧಾಕೃಷ್ಣ ಬ್ರಹ್ಮಾವರ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಗೌರವ ಅತಿಥಿಗಳಾಗಿ ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಅಧ್ಯಕ್ಷ ಉದಯ ಕುಮಾರ್, ಉದ್ಯಮಿ ನಿತಿನ್ ನಾರಾಯಣ ಗಾಣಿಗ (ಬೆಂಗಳೂರು), ವೇಣುಗೋಪಾಲಕೃಷ್ಣ ಎಜ್ಯುಕೇಶನ್ ಟ್ರಸ್ಟ್ ಬಾರ್ಕೂರು ಅಧ್ಯಕ್ಷ ಗಣೇಶ್ ಜಿ. ಚೆಲ್ಲೆಮಕ್ಕಿ, ಹೋಟೆಲ್ ಉದ್ಯಮಿ ಗೋಪಾಲ ಗಾಣಿಗ ಗಂಗೊಳ್ಳಿ, ಗಾಣಿಗ ಯುವ ಸಂಘಟನೆ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಗಾಣಿಗ ಕೋಟ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಗಾಣಿಗ ಸಮಾಜದ ಪ್ರಧಾನ ಕಾರ್ಯದರ್ಶಿ ನಾಗರಾಜ ಗಾಣಿಗ ಸಾಲಿಗ್ರಾಮ, ಖಜಾಂಚಿ ವಾಸುದೇವ ಬೈಕಾಡಿ, ಹಾರಾಡಿ ಮಹಾಬಲ ಗಾಣಿಗರ ಮಕ್ಕಳಾದ ವಿಶ್ವನಾಥ ಕಾರ್ತಟ್ಟು, ಜನಾರ್ದನ ಬ್ರಹ್ಮಾವರ ಹಾಗೂ ವಸಂತಿ ರಾಜು ಕಾರ್ತಟ್ಟು, ಗಾಣಿಗ ಯುವ ಸಂಘಟನೆ ಕೋಟದ ಗೌರವಾಧ್ಯಕ್ಷ ಪ್ರಶಾಂತ ಗಾಣಿಗ ಕಾರ್ಕಡ, ಉದ್ಯಮಿ ಕಿರಣ್ ಗಾಣಿಗ ಗೆಂಡಕೆರೆ, ರಘುರಾಮ ಬೈಕಾಡಿ, ಮಹಿಳಾ ಸಂಘಟನೆ ಕೋಟ ಘಟಕದ ಅಧ್ಯಕ್ಷೆ ರೇಖಾ ಗಣೇಶ ಚಿತ್ರಪಾಡಿ, ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಜಯಂತಿ ವಾಸುದೇವ ಬೈಕಾಡಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಆರ್.ಕೆ. ಬ್ರಹ್ಮಾವರ ಸ್ವಾಗತಿಸಿ, ಪ್ರಣತ್ ಆರ್. ಗಾಣಿಗ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಆನಂದ ಗಾಣಿಗ ವಂದಿಸಿದರು.
ವರದಿ: ಅರುಣ್ ಭಟ್ ಕಾರ್ಕಳ




