
ಬೆಂಗಳೂರು: ಕರ್ನಾಟಕ ಸರ್ಕಾರವು ಆಡಳಿತಾತ್ಮಕ ಕಾರಣಗಳಿಂದ ಹಿರಿಯ ಐಎಎಸ್ ಅಧಿಕಾರಿಗಳ ಮತ್ತೊಂದು ಸುತ್ತಿನ ವರ್ಗಾವಣೆ ನಡೆಸಿದ್ದು, ಐವರು ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹೊಸ ಹುದ್ದೆಗಳಿಗೆ ನಿಯೋಜಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್) ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಹೊಸದಾಗಿ ಸ್ಥಾಪಿಸಿರುವ ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷ್ ಗುಪ್ತಾ ಅವರನ್ನು ನೇಮಕ ಮಾಡಲಾಗಿದ್ದು, ಅವರು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯ ಅಧ್ಯಕ್ಷರ ಹೆಚ್ಚುವರಿ ಪ್ರಭಾರವನ್ನೂ ಮುಂದುವರಿಸಲಿದ್ದಾರೆ. ಹುದ್ದೆ ನಿರೀಕ್ಷೆಯಲ್ಲಿದ್ದ ಆರ್. ರಾಗಪ್ರಿಯ ಅವರನ್ನು ಕಾರ್ಮಿಕ ಇಲಾಖೆಯ ಆಯುಕ್ತರನ್ನಾಗಿ ನೇಮಕ ಮಾಡಲಾಗಿದ್ದು, ಕಾರ್ಮಿಕ ಇಲಾಖೆಯ ಆಯುಕ್ತರಾಗಿದ್ದ ಡಾ. ಗೋಪಾಲ ಕೃಷ್ಣ ಅವರನ್ನು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಾಗಿದ್ದ ಎನ್. ಮಂಜುಶ್ರೀ ಅವರಿಗೆ ಸದ್ಯ ಯಾವುದೇ ಹೊಸ ಹುದ್ದೆ ನೀಡಲಾಗಿಲ್ಲ. ಆಡಳಿತಾತ್ಮಕ ದಕ್ಷತೆ ಹೆಚ್ಚಿಸಿ ಸಾರ್ವಜನಿಕರ ಅಹವಾಲುಗಳನ್ನು ಒಂದೇ ಸೂರಿನಡಿ ತ್ವರಿತವಾಗಿ ವಿಲೇವಾರಿ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಪ್ರಜಾಸೇವಾ ಇಲಾಖೆಯನ್ನು ಸ್ಥಾಪಿಸಿದ್ದು, ಜೂನ್ 20ರ ಸಚಿವ ಸಂಪುಟ ಸಭೆಯ ತೀರ್ಮಾನದಂತೆ ಜೂನ್ 24ರಂದು ಡಿಪಿಎಆರ್ ಅಧಿಕೃತ ಅಧಿಸೂಚನೆ ಹೊರಡಿಸಿತ್ತು. ಆಡಳಿತ ಸುಧಾರಣೆ, ಸಾರ್ವಜನಿಕ ಕುಂದುಕೊರತೆ ವಿಭಾಗ ಹಾಗೂ ಸಕಾಲ ಮಿಷನ್ಗಳನ್ನು ವಿಲೀನಗೊಳಿಸಿ ಹೊಸ ಇಲಾಖೆಯನ್ನು ರಚಿಸಲಾಗಿದ್ದು, ಒಟ್ಟು 73 ಖಾಯಂ ಹುದ್ದೆಗಳನ್ನು ಮರುಹೊಂದಾಣಿಕೆ ಮೂಲಕ ಸೃಷ್ಟಿಸಲಾಗಿದೆ. ಸರ್ಕಾರದ ಕಾರ್ಯದರ್ಶಿ, ಮಿಷನ್ ನಿರ್ದೇಶಕ, ಅಪರ ಮಿಷನ್ ನಿರ್ದೇಶಕ, ಉಪ ಕಾರ್ಯದರ್ಶಿ ಹಾಗೂ ಆಡಳಿತಾಧಿಕಾರಿ ಸೇರಿದಂತೆ ವಿವಿಧ ಹುದ್ದೆಗಳ ಜೊತೆಗೆ ತಾಂತ್ರಿಕ ಮತ್ತು ಆಡಳಿತಾತ್ಮಕ ಕಾರ್ಯಗಳಿಗಾಗಿ 48 ಹುದ್ದೆಗಳನ್ನು ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ಅನುಮತಿ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ನೂತನ ಪ್ರಜಾಸೇವಾ ಇಲಾಖೆಯ ಆಡಳಿತದ ಹೊಣೆಗಾರಿಕೆಯನ್ನು ಹರ್ಷ್ ಗುಪ್ತಾ ಅವರಿಗೆ ವಹಿಸಿ ಸರ್ಕಾರ ಆದೇಶ ಹೊರಡಿಸಿದೆ.




