
ನವದೆಹಲಿ: ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಯ ನಿರ್ಮಾಣ ಹಾಗೂ ಕಾರ್ಯಾಚರಣೆಯ ಹೊಣೆ ಹೊತ್ತಿರುವ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (NHSRCL) ಒಟ್ಟು 224 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ 209 ನಾನ್-ಎಗ್ಸಿಕ್ಯೂಟಿವ್ ಹಾಗೂ 15 ಎಗ್ಸಿಕ್ಯೂಟಿವ್ ಹುದ್ದೆಗಳಿದ್ದು, ಆಧುನಿಕ ರೈಲ್ವೆ ಯೋಜನೆಯಲ್ಲಿ ಉದ್ಯೋಗ ಮಾಡಲು ಬಯಸುವ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸ್ಟೇಷನ್ ಮ್ಯಾನೇಜರ್, ಟ್ರೈನ್ ಮ್ಯಾನೇಜರ್, ಡಿಪೋ ಕಂಟ್ರೋಲರ್, ಆಪರೇಷನ್ಸ್ ಕಂಟ್ರೋಲರ್ ಹುದ್ದೆಗಳ ಜೊತೆಗೆ ಎಲೆಕ್ಟ್ರಿಕಲ್, ಸಿವಿಲ್, ಟ್ರ್ಯಾಕ್, ಸಿಗ್ನಲ್ ಮತ್ತು ಟೆಲಿಕಾಂ, ರೋಲಿಂಗ್ ಸ್ಟಾಕ್, ಆಟೋಮ್ಯಾಟಿಕ್ ಫೇರ್ ಕಲೆಕ್ಷನ್ ಸಿಸ್ಟಮ್ ವಿಭಾಗಗಳಲ್ಲಿ ಜೂನಿಯರ್ ಇಂಜಿನಿಯರ್ (JE) ಹುದ್ದೆಗಳು, ಐಟಿ ಹಾಗೂ ಭದ್ರತಾ ವಿಭಾಗಗಳಲ್ಲೂ ನೇಮಕಾತಿ ನಡೆಯಲಿದೆ. ಅಭ್ಯರ್ಥಿಗಳು ಸಂಬಂಧಿತ ವಿಭಾಗದಲ್ಲಿ ಮೂರು ವರ್ಷದ ಇಂಜಿನಿಯರಿಂಗ್ ಡಿಪ್ಲೊಮಾ ಅಥವಾ ಬಿ.ಇ./ಬಿ.ಟೆಕ್ ಪದವಿ ಹೊಂದಿರಬೇಕು. ಜೊತೆಗೆ ಭಾರತೀಯ ರೈಲ್ವೆ, ಸರ್ಕಾರಿ ಮೆಟ್ರೋ ಅಥವಾ ರೀಜನಲ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (RRTS) ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು. 2026ರ ಮೇ 31ಕ್ಕೆ ಅನ್ವಯಿಸುವಂತೆ ಗರಿಷ್ಠ ವಯೋಮಿತಿ 45 ವರ್ಷವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ತಿಂಗಳಿಗೆ ₹40,000 ರಿಂದ ₹1,25,000ರವರೆಗೆ ವೇತನ ನೀಡಲಾಗುವುದರ ಜೊತೆಗೆ ಇಂಡಸ್ಟ್ರಿಯಲ್ ಡಿಎ (IDA), ಮನೆ ಬಾಡಿಗೆ ಭತ್ಯೆ (HRA), ವೈದ್ಯಕೀಯ ಸೌಲಭ್ಯ ಸೇರಿದಂತೆ ಇತರೆ ಸರ್ಕಾರಿ ಸೌಲಭ್ಯಗಳೂ ಲಭ್ಯವಿರುತ್ತವೆ. ಸಾಮಾನ್ಯ, ಒಬಿಸಿ ಹಾಗೂ ಇಡಬ್ಲ್ಯೂಎಸ್ ಅಭ್ಯರ್ಥಿಗಳಿಗೆ ₹400 ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಎಗ್ಸಿಕ್ಯೂಟಿವ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜುಲೈ 9 ಹಾಗೂ ನಾನ್-ಎಗ್ಸಿಕ್ಯೂಟಿವ್ ಹುದ್ದೆಗಳಿಗೆ ಜುಲೈ 14 ಕೊನೆಯ ದಿನವಾಗಿದೆ. ಅಭ್ಯರ್ಥಿಗಳನ್ನು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ನಂತರ ದಾಖಲಾತಿ ಪರಿಶೀಲನೆ ಹಾಗೂ ವೈದ್ಯಕೀಯ ಫಿಟ್ನೆಸ್ ಪರೀಕ್ಷೆ ಮೂಲಕ ಅಂತಿಮವಾಗಿ ಆಯ್ಕೆ ಮಾಡಲಾಗುತ್ತದೆ.




