
ಚಿಕ್ಕಮಗಳೂರು: ಸಾಲುಸಾಲು ರಜೆ ಹಿನ್ನೆಲೆಯಲ್ಲಿ ಕಾಫಿನಾಡಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಗಾಳಿಕೆರೆಗೆ ಸಾವಿರಾರು ಪ್ರವಾಸಿಗರು ಹರಿದು ಬಂದ ಪರಿಣಾಮ ಪಶ್ಚಿಮ ಘಟ್ಟದ ಗಿರಿಭಾಗ ಜನಸಾಗರದಿಂದ ತುಂಬಿ ತುಳುಕಿತು. ಏಕಕಾಲದಲ್ಲಿ ಸಾವಿರಾರು ಪ್ರವಾಸಿ ಕಾರುಗಳು ಮುಳ್ಳಯ್ಯನಗಿರಿ ತಪ್ಪಲಿಗೆ ಪ್ರವೇಶಿಸಿದ ಪರಿಣಾಮ ಪಂಡರವಳ್ಳಿ, ಸೀತಾಳಯ್ಯನಗಿರಿ ಸೇರಿದಂತೆ ಗಿರಿಯ ಕಿರಿದಾದ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿ ಸಾವಿರಕ್ಕೂ ಹೆಚ್ಚು ವಾಹನಗಳು ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡವು. ಸುಂದರ ಪ್ರಕೃತಿ ಸೌಂದರ್ಯ ವೀಕ್ಷಿಸಲು ಬಂದ ಪ್ರವಾಸಿಗರು ಟ್ರಾಫಿಕ್ನಿಂದಾಗಿ ತೀವ್ರ ಪರದಾಡುವಂತಾಯಿತು. ಆನ್ಲೈನ್ ಟಿಕೆಟ್ ವ್ಯವಸ್ಥೆ ಜಾರಿಯಲ್ಲಿದ್ದರೂ ಅದನ್ನು ಸಮರ್ಪಕವಾಗಿ ಪಾಲಿಸದೆ ಪ್ರವಾಸೋದ್ಯಮ ಇಲಾಖೆ ಯಡವಟ್ಟು ಮಾಡಿದೆ ಎಂದು ಪ್ರವಾಸಿಗರು ಆರೋಪಿಸಿದ್ದು, ಒಂದೊಂದು ಕಾರಿನಿಂದ ₹1,000ರಿಂದ ₹1,500ರವರೆಗೆ ಹಣ ಪಡೆದು ಗಿರಿಭಾಗಕ್ಕೆ ಪ್ರವೇಶ ನೀಡಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ವಾಹನಗಳ ಸಂಖ್ಯೆಗೆ ಮಿತಿ ವಿಧಿಸದ ಕಾರಣ ರಸ್ತೆಯುದ್ದಕ್ಕೂ ವಾಹನಗಳ ಸಾಲು ನಿರ್ಮಾಣವಾಗಿ ಬೆಳಗ್ಗೆಯಿಂದಲೇ ಪ್ರವಾಸಿಗರು ವಾಹನಗಳಲ್ಲೇ ಕಾಲ ಕಳೆಯುವ ಪರಿಸ್ಥಿತಿ ಎದುರಾಯಿತು. ಭಾರೀ ಸಂಚಾರ ದಟ್ಟಣೆಯನ್ನು ನಿಯಂತ್ರಿಸಿ ವಾಹನಗಳನ್ನು ತೆರವುಗೊಳಿಸಲು ಪೊಲೀಸರು ಹಾಗೂ ಚೆಕ್ಪೋಸ್ಟ್ ಸಿಬ್ಬಂದಿ ಹರಸಾಹಸಪಟ್ಟರು. ಪ್ರವಾಸೋದ್ಯಮ ಇಲಾಖೆಯ ಸಮರ್ಪಕ ಯೋಜನೆಯ ಕೊರತೆ ಹಾಗೂ ವಾಹನಗಳ ನಿಯಂತ್ರಣ ವೈಫಲ್ಯದಿಂದ ಪ್ರವಾಸಿಗರು ಸಂಕಷ್ಟ ಅನುಭವಿಸುವಂತಾಗಿದ್ದು, ಇಂತಹ ಪರಿಸ್ಥಿತಿ ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.




