
ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಎಂಟು ತಿಂಗಳ ಕಂದಮ್ಮ ಎಲ್ಇಡಿ ಬಲ್ಬ್ ನುಂಗಿದ ಆತಂಕಕಾರಿ ಘಟನೆ ನಡೆದಿದ್ದು, ವೈದ್ಯರ ಸಮಯೋಚಿತ ಚಿಕಿತ್ಸೆ ಹಾಗೂ ಪೋಷಕರ ತಕ್ಷಣದ ಎಚ್ಚರಿಕೆಯಿಂದ ಮಗುವಿನ ಪ್ರಾಣ ಉಳಿದಿದೆ. ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಮಗು ಏಕಾಏಕಿ ವಿಪರೀತವಾಗಿ ಅಳಲು ಆರಂಭಿಸಿದ್ದು, ಗಾಬರಿಗೊಂಡ ಪೋಷಕರು ಕೂಡಲೇ ನಗರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ವೇಳೆ ಎಕ್ಸ್ರೇ ಪರೀಕ್ಷೆಯಲ್ಲಿ ಮಗುವಿನ ಗಂಟಲಿನಲ್ಲಿ ಸಣ್ಣ ಲೋಹದ ವಸ್ತು ಇರುವುದನ್ನು ವೈದ್ಯರು ಪತ್ತೆಹಚ್ಚಿದ್ದು, ಆರಂಭದಲ್ಲಿ ಪಿನ್ ಇರಬಹುದೆಂದು ಶಂಕಿಸಿದ್ದರು. ಬಳಿಕ ಲ್ಯಾರಿಂಗೊಸ್ಕೋಪ್ ಪರೀಕ್ಷೆ ನಡೆಸಿದಾಗ ಗಂಟಲಿನಲ್ಲಿ ಎಲ್ಇಡಿ ಬಲ್ಬ್ ಸಿಲುಕಿರುವುದು ಬೆಳಕಿಗೆ ಬಂದಿದೆ. ತಕ್ಷಣ ಇಎನ್ಟಿ ತಜ್ಞೆ ಡಾ. ರಾಜಶ್ರಿ ಹಾಗೂ ಮಕ್ಕಳ ತಜ್ಞ ಡಾ. ಖುಶ್ವಂತ್ ನೇತೃತ್ವದ ವೈದ್ಯರ ತಂಡ ಯಾವುದೇ ಶಸ್ತ್ರಚಿಕಿತ್ಸೆ ಮಾಡದೇ ಸುರಕ್ಷಿತವಾಗಿ ಬಲ್ಬ್ ಅನ್ನು ಹೊರತೆಗೆದಿದ್ದಾರೆ. ಆಟವಾಡುವ ಸಂದರ್ಭದಲ್ಲೇ ಮಗು ಬಲ್ಬ್ ನುಂಗಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ಆರೋಗ್ಯ ಸ್ಥಿರವಾಗಿದೆ. ಪೋಷಕರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಕರೆತಂದಿದ್ದರಿಂದ ಹಾಗೂ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.




