
ಚಿಕ್ಕಮಗಳೂರು: ಸಚಿವ ಕೆ.ಜೆ. ಜಾರ್ಜ್ ಒಡೆತನದ ಕಾಫಿ ತೋಟಕ್ಕೆ ಶಸ್ತ್ರಸಜ್ಜಿತ ಅಪರಿಚಿತರು ನುಗ್ಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮುತ್ತೋಡಿ ತಪ್ಪಲಿನ ಮಲ್ಲಂದೂರು ಸಮೀಪದ ಏಳುನೂರುಖಾನ್ ಕಾಫಿ ಎಸ್ಟೇಟ್ನಲ್ಲಿ ಬೆಳಕಿಗೆ ಬಂದಿದೆ. ಜೂನ್ 17, 21 ಹಾಗೂ 22ರಂದು ಮಧ್ಯರಾತ್ರಿ ವೇಳೆ ಅಪರಿಚಿತರು ಬಂದೂಕು ಹಾಗೂ ಇತರೆ ಮಾರಕಾಸ್ತ್ರಗಳೊಂದಿಗೆ ತೋಟದೊಳಗೆ ಪ್ರವೇಶಿಸಿ ಓಡಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅವರ ಚಲನವಲನಗಳು ತೀವ್ರ ಅನುಮಾನಕ್ಕೆ ಕಾರಣವಾಗಿವೆ. ಮುತ್ತೋಡಿ ಅಭಯಾರಣ್ಯಕ್ಕೆ ಹೊಂದಿಕೊಂಡಿರುವ ಈ ಕಾಫಿ ಎಸ್ಟೇಟ್ನಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳ ಬೇಟೆಗೆ ಬಂದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು, ಕಾನೂನುಬಾಹಿರ ಚಟುವಟಿಕೆ ನಡೆಸುವ ಉದ್ದೇಶವೂ ಇರಬಹುದೆಂದು ತೋಟದ ವ್ಯವಸ್ಥಾಪಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಪರಿಚಿತರ ಅಕ್ರಮ ಪ್ರವೇಶದಿಂದ ಸಿಬ್ಬಂದಿ ಹಾಗೂ ತೋಟದ ಭದ್ರತೆ ಬಗ್ಗೆ ಆತಂಕ ಮೂಡಿದ್ದು, ತೋಟದ ಹಿರಿಯ ವ್ಯವಸ್ಥಾಪಕಿ ದಿವ್ಯಾ ಮಲ್ಲಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ತನಿಖೆ ಆರಂಭಿಸಿರುವ ಪೊಲೀಸರು, ಅಕ್ರಮ ಬಂದೂಕುದಾರಿ ನುಸುಳುಕೋರರ ಪತ್ತೆಗೆ ಬಲೆ ಬೀಸಿದ್ದಾರೆ. ಈ ಸಂಬಂಧ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಶಸ್ತ್ರಸಜ್ಜಿತ ವ್ಯಕ್ತಿಗಳ ಗುರುತು ಹಾಗೂ ಅವರ ಉದ್ದೇಶದ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




